Select Your Language

Notifications

webdunia
webdunia
webdunia
webdunia

ಹಾಲಿನ ಬರ್ಫಿ ಮಾಡಿ ಸವಿಯಿರಿ..

ಹಾಲಿನ ಬರ್ಫಿ ಮಾಡಿ ಸವಿಯಿರಿ..
ಬೆಂಗಳೂರು , ಬುಧವಾರ, 3 ಅಕ್ಟೋಬರ್ 2018 (18:03 IST)
ಯಾರಾದರೂ ಸ್ನೇಹಿತರು ಅಥವಾ ಅತಿಥಿಗಳು ಮನೆಗೆ ಬಂದಾಗ ಸಿಹಿಯನ್ನು ಮಾಡುತ್ತೇವೆ. ಹಬ್ಬ ಹರಿದಿನಗಳು ಬಂದರೂ ಸಿಹಿಯನ್ನು ಮಾಡುತ್ತೇವೆ. ಸಾಮಾನ್ಯವಾಗಿ ಎಲ್ಲರಿಗೂ ಹಾಲಿನಿಂದ ಮಾಡಿದ ಸಿಹಿ ತಿನಿಸುಗಳೆಂದರೆ ಬಲು ಪ್ರೀತಿ. ಮಕ್ಕಳು, ಹಿರಿಯರು ಎಲ್ಲರ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮವೇ. ಹಾಲಿನ ಬರ್ಫಿ ಮಾಡುವ ವಿಧಾನ ತುಂಬಾ ಸರಳವಾಗಿದ್ದು ಅದರಲ್ಲಿ ಬಳಸುವ ಸಾಮಗ್ರಿಗಳೂ ಸಹ ಬಹಳ ಕಡಿಮೆ. ಹಾಲಿನ ಬರ್ಫಿ ಮಾಡುವ ಸರಳ ವಿಧಾನಕ್ಕಾಗಿ ಮುಂದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಹಾಲು - 2 ಲೀಟರ್
ನಿಂಬೆ ರಸ - 1/2 ಚಮಚ
ಸಕ್ಕರೆ - 1/4 ಕಪ್
ತುಪ್ಪ - 4 ಚಮಚ
ಬಾದಾಮಿ ಮತ್ತು ಪಿಸ್ತಾ
 
ಮಾಡುವ ವಿಧಾನ:
2 ಲೀಟರ್ ಹಾಲನ್ನು ಒಂದು ಪ್ಯಾನ್‌ನಲ್ಲಿ ಹಾಕಿ ಕುದಿಸಿ. ಹಾಲು ಕುದಿಯುವಾಗ ಒಂದು ಚಮಚದಿಂದ ಅದನ್ನು ಮಿಕ್ಸ್ ಮಾಡುತ್ತಿರಿ. ಹಾಲು ಕುದಿದು ಅರ್ಧದಷ್ಟಾದಾಗ ಉರಿಯನ್ನು ಮಧ್ಯಮದಲ್ಲಿರಿಸಿ ಮತ್ತೆ ಕುದಿಸಿ. 1/3 ಭಾಗದಷ್ಟಾದಾಗ ಕಡಿಮೆ ಉರಿಯಲ್ಲಿ ಕುದಿಸಲು ಪ್ರಾರಂಭಿಸಿ. ಹಾಲನ್ನು ಕುದಿಸಿ 1/4 ಭಾಗದಷ್ಟಾದಾಗ ಅತಿ ಕಡಿಮೆ ಉರಿಯಲ್ಲಿ ಮಿಕ್ಸ್ ಮಾಡಿ. ಹಾಲು ಗಟ್ಟಿಯಾಗುತ್ತಾ ಬಂದಂತೆ ಅದಕ್ಕೆ 1/2 ಚಮಚ ನಿಂಬೆ ರಸವನ್ನು ಸೇರಿಸಿ. 2 ನಿಮಿಷದ ನಂತರ 3-4 ಟೇಬಲ್ ಚಮಚ ಸಕ್ಕರೆಯನ್ನು ಹಾಕಿ ಅದು ಕರಗುವವರೆಗೆ ಮಿಕ್ಸ್ ಮಾಡುತ್ತಿರಿ. ನಂತರ ಮತ್ತೆ 1-2 ಟೇಬಲ್ ಚಮಚ ಸಕ್ಕರೆಯನ್ನು ಹಾಕಿ 1 ನಿಮಿಷ ಬೆರೆಸುತ್ತಿರಿ.
 
ಈಗ ಈ ಮಿಶ್ರಣಕ್ಕೆ 2-3 ಚಮಚ ತುಪ್ಪವನ್ನು ಹಾಕಿ ಮಧ್ಯಮ ಉರಿಯಲ್ಲಿ ಮಿಕ್ಸ್ ಮಾಡುತ್ತಿರಿ. ಹೀಗೆಯೇ ಇನ್ನೊಮ್ಮೆ 2 ಚಮಚ ತುಪ್ಪವನ್ನು ಹಾಕಿ ಬೆರೆಸಿ. ಹಾಲಿಗೆ ಸಕ್ಕರೆಯನ್ನು ಸೇರಿಸಿದ ಮೇಲೆ ಸತತವಾಗಿ ಕೈಯಾಡಿಸುತ್ತಲೇ ಇರಬೇಕಾಗುತ್ತದೆ. ಈ ಮಿಶ್ರಣ ಗಟ್ಟಿಯಾಗಿ ಪ್ಯಾನ್‌ನ ತಳವನ್ನು ಬಿಟ್ಟಾಗ ಅದನ್ನು ಒಂದು ಪ್ಲೇಟ್‌ಗೆ ತುಪ್ಪವನ್ನು ಸವರಿ ಅದರಲ್ಲಿ ಹಾಕಿ. ಈಗ ಇದನ್ನು 20-30 ನಿಮಿಷ ಮುಚ್ಚಿಟ್ಟು ನಂತರ ಅದರ ಮೇಲೆ ಬಾದಾಮಿ ಪಿಸ್ತಾ ಚೂರುಗಳನ್ನು ಹಾಕಿ ಅಲಂಕರಿಸಿಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿಕೊಂಡರೆ ಹಾಲಿನ ಬರ್ಫಿ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನವೂ ಮಾಡಿ ಜಾಯಿಕಾಯಿಯ ಬಳಕೆ