ಈ ಗಣೇಶ ಚತುರ್ಥಿಗೆ ರುಚಿಯಾದ ಬಗೆಬಗೆಯ ಮೋದಕಗಳನ್ನು ಮಾಡಿ ಸವಿಯಿರಿ..

Webdunia
ಮಂಗಳವಾರ, 11 ಸೆಪ್ಟಂಬರ್ 2018 (15:18 IST)
ಇನ್ನೇನು ಈ ವರ್ಷದ ಗಣೇಶ ಚತುರ್ಥಿ ಬರುತ್ತಿದೆ. ಗಣೇಶ ಚತುರ್ಥಿ ಎಂದರೆ ತಿಂಡಿ ತಿನಿಸುಗಳದೇ ಹಬ್ಬ. ಇದು ಮೋದಕ ಪ್ರಿಯ ಗಣೇಶನ ಹಬ್ಬವಾಗಿರುವುದರಿಂದ ಮೋದಕಗಳನ್ನು ತಯಾರಿಸಲೇಬೇಕು. ಹಲವಾರು ಬಗೆಯ ಮೋದಕಗಳನ್ನು ತಯಾರಿಸಬಹುದಾಗಿದ್ದು ಅವುಗಳಲ್ಲಿ ಕೆಲವು ಇಲ್ಲಿವೆ,
1. ಎಳ್ಳಿನ ಮೋದಕ
 
ಬೇಕಾಗುವ ಸಾಮಗ್ರಿಗಳು:
 
ಬಿಳಿ ಎಳ್ಳು - 1/2 ಕಪ್
ಕೊಬ್ಬರಿ ತುರಿ - 1 ಕಪ್
ತುರಿದ ಬೆಲ್ಲ - 1/2 ಕಪ್
ತುಪ್ಪ - 2-3 ಚಮಚ
ಏಲಕ್ಕಿ ಪುಡಿ - 1 ಚಮಚ
ಮೈದಾ ಹಿಟ್ಟು - 1 ಕಪ್
ಉಪ್ಪು - ರುಚಿಗೆ
 
ಮಾಡುವ ವಿಧಾನ: ಮೈದಾಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಒಂದು ಪ್ಯಾನ್‌ನಲ್ಲಿ ಎಳ್ಳನ್ನು ಸ್ವಲ್ಪ ಹೊಂಬಣ್ಣ ಬರುವವರೆಗೆ ಹುರಿದು ಬದಿಗಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್‌ಗೆ ಬೆಲ್ಲ ಮತ್ತು ಕೊಬ್ಬರಿ ತುರಿಯನ್ನು ಹಾಕಿ ಅದು ಸ್ವಲ್ಪ ಪಾಕ ಬಂದಂತೆ ಅದಕ್ಕೆ ಹುರಿದಿಟ್ಟ ಎಳ್ಳು, ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿ. ಮೈದಾ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ನಂತರ ಅದನ್ನು ಚಿಕ್ಕದಾಗಿ ಲಟ್ಟಿಸಿಕೊಂಡು ಅದರಲ್ಲಿ ಈ ಮೊದಲೇ ತಯಾರಿಸಿದ ಎಳ್ಳಿನ ಮಿಶ್ರಣವನ್ನು ತುಂಬಿ ಮೋದಕದ ಆಕಾರವನ್ನು ನೀಡಿ. ಇದರ ಜೊತೆಗೆ ಒಂದು ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ಹೀಗೆ ಎಲ್ಲಾ ಉಂಡೆಗಳಲ್ಲಿ ಎಳ್ಳಿನ ಮಿಶ್ರಣವನ್ನು ತುಂಬಿದ ನಂತರ ಕಾದ ಎಣ್ಣೆಯಲ್ಲಿ ಅವುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ಮೋದಕ ರೆಡಿಯಾಗುತ್ತದೆ.
 
2. ಡ್ರೈ ಫ್ರೂಟ್ಸ್ ಮೋದಕ
 
ಬೇಕಾಗುವ ಸಾಮಗ್ರಿಗಳು:
ಖರ್ಜೂರ - 1 ಕಪ್
ಗೋಡಂಬಿ - 1/4 ಕಪ್
ಬಾದಾಮಿ - 1/4 ಕಪ್
ಪಿಸ್ತಾ - 1/4 ಕಪ್
ತುಪ್ಪ - 2-3 ಚಮಚ
ಮೈದಾ ಹಿಟ್ಟು - 1 ಕಪ್
ಉಪ್ಪು - ರುಚಿಗೆ
 
ಮಾಡುವ ವಿಧಾನ: ಮೈದಾಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಒಂದು ಪ್ಯಾನ್‌ನಲ್ಲಿ 2-3 ಚಮಚ ತುಪ್ಪವನ್ನು ಹಾಕಿ ಅದರಲ್ಲಿ ಚಿಕ್ಕ ಚೂರುಗಳನ್ನಾಗಿ ಮಾಡಿದ ಪಿಸ್ತಾ, ಗೋಡಂಬಿ, ಖರ್ಜೂರ ಹಾಗೂ ಬಾದಾಮಿಯನ್ನು ಹಾಕಿ ಹುರಿದು ಆರಲು ಬಿಡಿ. ನಂತರ ಈ ಮಿಶ್ರಣವನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಈ ಮೊದಲೇ ತಯಾರಿಸಿಟ್ಟ ಮೈದಾ ಹಿಟ್ಟಿನ ಕಣಕವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಅದರೊಳಗೆ ರುಬ್ಬಿದ ಮಿಶ್ರಣವನ್ನು ಮೋದಕದ ಆಕಾರದಲ್ಲಿ ತುಂಬಿ. ನಂತರ ಅದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣಬರುವವರೆಗೆ ಸಣ್ಣ ಉರಿಯಲ್ಲಿ ಕರಿದರೆ ಡ್ರೈ ಫ್ರೂಟ್ಸ್ ಮೋದಕ ರೆಡಿಯಾಗುತ್ತದೆ.
 
3. ಶೇಂಗಾ ಅಥವಾ ನೆಲಗಡಲೆ ಮೋದಕ
ಶೇಂಗಾ - 1 ಕಪ್
ತುರಿದ ಬೆಲ್ಲ - 1/3 ಕಪ್
ತೆಂಗಿನಕಾಯಿ ತುರಿ - 1/2 ಕಪ್
ಅಕ್ಕಿ ಹಿಟ್ಟು - 1 ಕಪ್
ತುಪ್ಪ - 2-3 ಚಮಚ
ಉಪ್ಪು - ರುಚಿಗೆ
ಏಲಕ್ಕಿ ಪುಡಿ - 1 ಚಮಚ
 
ಮಾಡುವ ವಿಧಾನ:
ಒಂದು ಪ್ಯಾನ್ ತೆಗೆದುಕೊಂಡು ಸಣ್ಣ ಉರಿಯಲ್ಲಿ ಶೇಂಗಾವನ್ನು ಹುರಿಯಿರಿ. ಹುರಿದ ಶೇಂಗಾ ಸ್ವಲ್ಪ ಆರಿದ ಮೇಲೆ ಅದನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಪ್ಯಾನ್‌ನಲ್ಲಿ ಬೆಲ್ಲ, ತೆಂಗಿನಕಾಯಿ ತುರಿ ಸೇರಿಸಿ 8-10 ನಿಮಿಷ ಬಿಸಿಮಾಡಿ. ನಂತರ ಅದಕ್ಕೆ ರುಬ್ಬಿಟ್ಟುಕೊಂಡ ಶೇಂಗಾ, ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೂ ತಿರುವಿ ಉರಿಯನ್ನು ಆಫ್ ಮಾಡಿ.
 
ಇನ್ನೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಅಗತ್ಯವಿರುವಷ್ಟು ನೀರನ್ನು ಹಾಕಿ ಬಿಸಿಮಾಡಿ. ನೀರು ಕುದಿಯುತ್ತಿದ್ದಂತೆ ಅದಕ್ಕೆ ಅಕ್ಕಿಹಿಟ್ಟು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ತಿರುವಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಈ ಹಿಟ್ಟನ್ನು ಚೆನ್ನಾಗಿ ನಾದಿಕೊಂಡರೆ ಕಣಕ ಸಿದ್ಧವಾಗುತ್ತದೆ. ಈ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಅದರಲ್ಲಿ ಶೇಂಗಾ ಮಿಶ್ರಣವನ್ನು ಸೇರಿಸಿ ಮೋದಕದ ಆಕಾರವನ್ನು ನೀಡಿ. ಈ ಮೋದಕಗಳನ್ನು ತಯಾರಿಸಲು ಅಚ್ಚುಗಳೂ ಸಹ ಲಭ್ಯವಿದ್ದು ನೀವು ಅದನ್ನು ಬಳಸಬಹುದಾಗಿದೆ. ನಂತರ ಅವುಗಳನ್ನು 15 ನಿಮಿಷ ಹಬೆಯಲ್ಲಿ ಬೇಯಿಸಿದರೆ ಶೇಂಗಾ ಮೋದಕ ರೆಡಿಯಾಗುತ್ತದೆ. ಇದನ್ನು ತಯಾರಿಸಲು ಎಣ್ಣೆಯನ್ನು ಬಳಸದೇ ಇರುವುದರಿಂದ ಆರೋಗ್ಯ ದೃಷ್ಟಿಯಿಂದಲೂ ಸಹ ಒಳ್ಳೆಯದು.

ಖಾಲಿ ಹೊಟ್ಟೆಯಲ್ಲಿ ಯಾವ್ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಅಂತ ಗೊತ್ತಾ?

ಸುಲಭವಾಗಿ ಬಾಳೆಹಣ್ಣಿನಿಂದ ಶ್ಯಾವಿಗೆ ಮಾಡಬಹುದು ಗೊತ್ತಾ?

ಒಮ್ಮೆ ಮಾಡಿ ನೋಡಿ ಕ್ಯಾರೆಟ್ ಕ್ಯಾಪ್ಸಿಕಮ್ ಚಪಾತಿ

ಪ್ರಧಾನಿ ಮೋದಿಗೆ ಒಬ್ಬ ಹೈಕಮಾಂಡ್ ಇದ್ದಾರೆ! ಅವರು ಯಾರು ಗೊತ್ತಾ?

ಮತ್ತೆ ಮೂರು ಬ್ಯಾಂಕ್‍ ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ. ಅವು ಯಾವುವು ಗೊತ್ತಾ?

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ