Select Your Language

Notifications

webdunia
webdunia
webdunia
webdunia

ಎಕ್ಸ್ ಕ್ಲೂಸಿವ್: ಗಟ್ಟಿಮೇಳದಿಂದ ಹೊರಬರಲು ಕಾರಣ ತಿಳಿಸಿದ ಅಭಿಷೇಕ್

ಎಕ್ಸ್ ಕ್ಲೂಸಿವ್: ಗಟ್ಟಿಮೇಳದಿಂದ ಹೊರಬರಲು ಕಾರಣ ತಿಳಿಸಿದ ಅಭಿಷೇಕ್
ಬೆಂಗಳೂರು , ಮಂಗಳವಾರ, 13 ಜೂನ್ 2023 (11:17 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರವಾಹಿಯಲ್ಲಿ ಇಷ್ಟು ದಿನ ವಿಕ್ರಾಂತ್ ವಸಿಷ್ಠ ಪಾತ್ರಧಾರಿಯಾಗಿ ಮಿಂಚಿದ್ದ ನಟ ಅಭಿಷೇಕ್ ರಾಮ್ ದಾಸ್ ಪಾತ್ರ ಇದೀಗ ಕೊನೆಯಾಗುತ್ತಿದೆ. ವಿಕ್ರಾಂತ್ ಆಕ್ಸಿಡೆಂಟ್ ನಲ್ಲಿ ಸಾಯುವ ಮೂಲಕ ಪಾತ್ರ ಕೊನೆಯಾಗುತ್ತಿದೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ಧಾರವಾಹಿಯಲ್ಲಿ ತಮ್ಮ ಪಾತ್ರ ಕೊನೆಯಾಗುತ್ತಿರುವುದರ ಬಗ್ಗೆ ಸ್ವತಃ ಅಭಿಷೇಕ್ ವೆಬ್ ದುನಿಯಾಗೆ ಪ್ರತಿಕ್ರಿಯಿಸಿದ್ದಾರೆ.

ಗಟ್ಟಿಮೇಳ ಧಾರವಾಹಿಯಲ್ಲಿ ನಿಮ್ಮ ಪಾತ್ರ ಕೊನೆಯಾಗುತ್ತಿರುವುದು ಯಾಕೆ? ಅಥವಾ ಏನಾದರೂ ಟ್ವಿಸ್ಟ್ ಇದೆಯಾ?
ಧಾರವಾಹಿಯಿಂದ ನಾನೇ ಹೊರಗೆ ಬರುವ ನಿರ್ಧಾರ ಮಾಡಿದ್ದೆ. ಕಾರಣ ಏನಂದರೆ ನನಗೆ ಸ್ಟೋರಿ ಲೈನ್ ಇಷ್ಟ ಆಗಿರಲಿಲ್ಲ. ನನಗೆ ಇನ್ನೂ ಸಣ್ಣ ವಯಸ್ಸು. ಧಾರವಾಹಿಯಲ್ಲಿ ಮುಂದೆ ನಾನು ತಂದೆಯಾಗುವ ಸನ್ನಿವೇಶವಿದೆ. ಈಗಲೇ ಅಪ್ಪನ ಪಾತ್ರ ಮಾಡಲು ಇಷ್ಟವಿಲ್ಲ. ನಾನು ಈ ನಾಲ್ಕು ವರ್ಷಗಳಿಂದ ಆ ಪಾತ್ರ ಮಾಡಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಅನಿಸಿತು. ಅಷ್ಟೇ ಅಲ್ಲ, ಸಾಕಷ್ಟು ಸಿನಿಮಾ ಕೈಯಲ್ಲಿದೆ. ಹೀಗಾಗಿ ಧಾರವಾಹಿ ಬಿಟ್ಟು ಸಿನಿಮಾ ಕಡೆ ಗಮನ ಹರಿಸಬೇಕು ಎಂದು ನಾನೇ ಹೊರಬರುತ್ತಿದ್ದೇನೆ.

ಗಟ್ಟಿಮೇಳ ವಿಕ್ರಾಂತ್ ಆಗಿ ನಿಮ್ಮ ಪ್ರಯಾಣ ಹೇಗಿತ್ತು?
ನನ್ನ ಫಸ್ಟ್ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೊ ಅಂತ. ಆದರೆ ಆ ಸಿನಿಮಾದಿಂದ ನನಗೆ ವೈಯಕ್ತಿಕವಾಗಿ ಹೆಚ್ಚು ಹೆಸರು ಬರಲಿಲ್ಲ. ಐದು ವರ್ಷದ ನಂತರ ಈಗ ನನ್ನ ಸಿನಿಮಾ ರಿಲೀಸ್ ಆಗ್ತಿದೆ. ಈ ಐದು ವರ್ಷ ನಾನು ವೇಸ್ಟ್ ಮಾಡಿಲ್ಲ ಅನಿಸಿತು. ಕಿರುತೆರೆಯಲ್ಲಿ ವಿಕ್ಕಿ ಎನ್ನುವ ಪಾತ್ರ ಮಾಡಿ, ಗಟ್ಟಿಮೇಳ ಧಾರವಾಹಿಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದೇನೆ. ಅದರ ಬಗ್ಗೆ ಖುಷಿಯಿದೆ. ಈ ನಾಲ್ಕು ವರ್ಷಗಳಲ್ಲಿ ಪ್ರೀತಿ ತೋರಿಸಿದ ಜನ ನನ್ನ ಸಿನಿಮಾ ನೋಡಿ ಆಶೀರ್ವಾದ ಮಾಡ್ತಾರೆ ಎನ್ನುವ ನಂಬಿಕೆಯಿದೆ.

ನೀವು ಗಟ್ಟಿಮೇಳದಿಂದ ಹೊರಬರ್ತೀರಿ ಎಂದಾಗ ಟೀಂ ರೆಸ್ಪಾನ್ಸ್ ಹೇಗಿತ್ತು?
ಸ್ಟೋರಿ ಲೈನ್ ಚೇಂಜ್ ಮಾಡಿದ್ರೆ ಮುಂದುವರಿಯುತ್ತೇನೆ ಎಂದಿದ್ದೆ. ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ನನಗೆ ಇನ್ನೂ 26 ವರ್ಷ. ಈ ವಯಸ್ಸಿನಲ್ಲೇ ತಂದೆಯ ಪಾತ್ರ ಮಾಡುವುದು ಇಷ್ಟವಿರಲಿಲ್ಲ. ನನ್ನ ರಿಪ್ಲೇಸ್ ಮಾಡಿ ಎಂದು ನಾನೇ ಟೀಂಗೆ ಹೇಳಿದ್ದೆ. ಆದರೆ ಚಾನೆಲ್ ನವರು ಕೆಲವೊಂದು ಪಾತ್ರವನ್ನು ರಿಪ್ಲೇಸ್ ಮಾಡಕ್ಕಾಗಲ್ಲ ಎಂದು ಪಾತ್ರವನ್ನೇ ಸಾಯಿಸುವ ನಿರ್ಧಾರಕ್ಕೆ ಬಂದರು. ಹೇಗಿದ್ದರೂ ನನ್ನ ಒಪ್ಪಂದ ಮುಗಿದಿತ್ತು. ಹೀಗಾಗಿ ಹೊರಬಂದೆ.

ಫ್ಯಾನ್ಸ್ ರೆಸ್ಪಾನ್ಸ್ ಹೇಗಿದೆ?
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಮೆಸೇಜ್ ಮಾಡ್ತಿ ಬಿಡ್ಬೇಡಿ ಅಂತಿದ್ದಾರೆ. ನಮ್ಮ ಮನೆಯಲ್ಲಿ ನಮ್ಮ ಅಮ್ಮನೇ ಹೇಳ್ತಿದ್ದಾರೆ. ಯಾಕೆಂದರೆ ಅವರಿಗೆ ನನ್ನನ್ನು ಪ್ರತಿದಿನ ಟಿವಿಯಲ್ಲಿ ಕೂತು ನೋಡ್ಬಹುದು ಎಂಬ ಖುಷಿಯಿತ್ತು. ನನಗೆ ಗಟ್ಟಿಮೇಳದಿಂದಲೇ ಹೆಸರು ಸಿಕ್ಕಿತ್ತು. ಆದರೆ ನಾನು ಅಭಿ ಆಗಿ ಮರೆತೇ ಹೋಗಿದ್ದೆ. ಎಲ್ಲೇ ಹೋದರೂ ವಿಕ್ಕಿ ಅಂತಲೇ ಗುರುತಿಸಿಕೊಳ್ಳುತ್ತಿದ್ದೆ. ಹೀಗಾಗಿ ನನ್ನ ಸ್ವಂತ ಐಡೆಂಟಿಟಿಯೇ ಮರೆತು ಹೋಯಿತೇ ಎನಿಸಿತು. ಅದಕ್ಕೆ ಸಿನಿಮಾವೇ ಬೆಸ್ಟ್ ಎನಿಸಿತು.

ಕಿರುತೆರೆ ನಿಮ್ಮ ವೃತ್ತಿಗೆ ಎಷ್ಟು ಸಹಾಯ ಮಾಡಿದೆ?
ತಿಂಗಳಿಗೆ 20 ದಿನ ಕೆಲಸ ಮಾಡ್ತಿದ್ದೆ. ನಾಲ್ಕು ವರ್ಷದಿಂದ ನಟನೆ ಮಾಡಿ ನನಗೆ ಸಾಕಷ್ಟು ಅನುಭವ ಸಿಕ್ಕಿತು. ಈಗ ಸಿನಿಮಾದಲ್ಲೂ ಕೆಲವರು ನಾಲ್ಕೈದು ಟೇಕ್ ತೆಗೆದುಕೊಳ್ಳುವಾಗ ನಾವು ಒಂದೇ ಟೇಕ್ ನಲ್ಲಿ ಮುಗಿಸುವುದನ್ನು ನೋಡಿ ಈ ಧಾರವಾಹಿ ಪಯಣ ನನಗೆ ಎಷ್ಟು ಸಹಾಯ ಮಾಡಿದೆ ಎಂದು ಖುಷಿಯಾಗುತ್ತದೆ. ಹಾಗಾಗಿ ಸಾಕಷ್ಟು ನಟನೆ ಕಲಿತಿದ್ದೀನಿ ಇಲ್ಲಿ.

ಗಟ್ಟಿಮೇಳ ಧಾರವಾಹಿಯಲ್ಲಿ ಕೊನೆಯ ದಿನದ ಚಿತ್ರೀಕರಣದ ಅನುಭವ
ಕೊನೆಯ ದಿನ ಸಾಕಷ್ಟು ಭಾವುಕನಾದೆ. ಎಲ್ಲರೂ ಅತ್ತರು, ನಾನೂ ಅತ್ತಿದ್ದೆ. ಸೆಟ್ ನಲ್ಲಿ ಎಲ್ಲರೂ ಕಳುಹಿಸಿಕೊಡುವಾಗ ಬೇಸರ ಮಾಡಿಕೊಂಡರು.
ಸೆಟ್ ನಲ್ಲಿ ಯಾರನ್ನು ಹೆಚ್ಚು ಮಿಸ್ ಮಾಡಿಕೊಳ್ತೀರಿ
ನನ್ನ ಬಾವನ ಕ್ಯಾರೆಕ್ಟರ್ ಮಾಡ್ತಾ ಇದ್ದ ಗಿರೀಶ್ ಬೆಟ್ಟಪ್ಪ, ಮತ್ತೆ ನಮ್ಮ ಅಗ್ರಜ ರಕ್ಷ್. ಇಬ್ಬರನ್ನೂ ಮಿಸ್ ಮಾಡಿಕೊಳ್ತೀನಿ.
ಮುಂದಿನ ಸಿನಿಮಾ ಪ್ಲ್ಯಾನ್ ಏನು?
ಒಟ್ಟು ಐದು ಸಿನಿಮಾ ಮಾಡಿದ್ದೀನಿ. ಜೂನ್, ಜುಲೈ, ಆಗಸ್ಟ್ ನಲ್ಲಿ ರಿಲೀಸ್ ಆಗ್ತಾ ಇದೆ. ಹಾಸ್ಟೆಲ್ ಬಾಯ್ಸ್, ಬೆಂಗಳೂರು ಬಾಯ್ಸ್, ವಿಜಯ್ ರಾಘವೇಂದ್ರ ಜೊತೆ ಮರೀಚೆ, ನಗುವಿನ ಹೂಗಳ ಮೇಲೆ ಅಂತ ಸೋಲೋ ಹೀರೋ ಆಗಿ, ಅದಾದ ಮೇಲೆ ಮಿಸ್ಟರ್ ಆಂಡ್ ಮಿಸೆಸ್ ಅಂತ ಸಿನಿಮಾ ಮಾಡ್ತಾ ಇದ್ದೇನೆ. ಇದರಲ್ಲಿ ಮೂರು ರಿಲೀಸ್ ಗೆ ರೆಡಿಯಿದೆ.
ಕೊನೆಯದಾಗಿ ಫ್ಯಾನ್ಸ್ ಗೆ ಏನು ಹೇಳ್ತೀರಿ?
ಈ ನಾಲ್ಕು ವರ್ಷ ನನ್ನ ಕಿರುತೆರೆಯಲ್ಲಿ ಫ್ಯಾನ್ಸ್ ಮೆರೆಸಿದ್ದಾರೆ. ಅದೇ ರೀತಿ ಬೆಳ್ಳಿತೆರೆಯಲ್ಲೂ ನನ್ನದೇ ಒಂದು ಬ್ರ್ಯಾಂಡ್ ಕ್ರಿಯೇಟ್ ಮಾಡಬೇಕು ಎಂದು ಆಸೆ. ಅದಕ್ಕೂ ಅದೇ ರೀತಿ ಸಪೋರ್ಟ್ ಮಾಡಿದರೆ ಸಾಕು ಎಂದಷ್ಟೇ ಕೇಳಿಕೊಳ್ಳುತ್ತೇನೆ.

-ಕೃಷ್ಣವೇಣಿ ಕೆ.

Share this Story:

Follow Webdunia kannada

ಮುಂದಿನ ಸುದ್ದಿ

48 ರಲ್ಲೂ ಮಹೇಶ್ ಬಾಬು ಇಷ್ಟು ಹ್ಯಾಂಡ್ಸಮ್ ಆಗಿರುವುದರ ಗುಟ್ಟು