Select Your Language

Notifications

webdunia
webdunia
webdunia
webdunia

ಚೆಸ್ "ವಿಶ್ವನಾಥ"ನಾದ ಆನಂದ್

ಚೆಸ್
ಮಂಜುನಾಥ ಬಂಡಿ

ನಮ್ಮ ಹೆಮ್ಮೆಯ ಕ್ರೀಡಾ ಪುತ್ರರತ್ನ ವಿಶ್ವನಾಥನ್ ಆನಂದ್ ಅವರ ಸಾಧನೆ ಶ್ಲಾಘನೆಗಿಂತಲೂ ಪೂರ್ವದಲ್ಲಿ ಕಳೆದೆರಡು ತಿಂಗಳ ಭಾರತೀಯ ಕ್ರೀಡಾರಂಗದ ಸುತ್ತ ಒಂದು ಇಣುಕುನೋಟ ಹರಿಸಿಬರೋಣ ಬನ್ನಿ.

ಈ ಅವಧಿಯಲ್ಲಿ ಭಾರತವು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ವಿಜಯೋತ್ಸವಗಳನ್ನು, ಸಂಭ್ರಮಗಳನ್ನು ಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ತಮ್ಮ ಚೈತನ್ಯಭರಿತ, ನೈಜ ಅಭಿನಯದ ಮೂಲಕ ಬಾಲಿವುಡ್ ರಂಗದ ಬಾದಶಾ ಶಾರೂಖ್ ಖಾನ್, "ಚಕ್ ದೇ ಇಂಡಿಯಾ" ಸಿನೆಮಾ ಮಾಡಿ ಕೇವಲ ಹಾಕಿ ರಂಗಕ್ಕಷ್ಟೇ ಅಲ್ಲದೆ, ಭಾರತೀಯ ಕ್ರೀಡಾ ರಂಗದಲ್ಲೇ ಸ್ಫೂರ್ತಿ ತುಂಬಿಬಿಟ್ಟರೋ ಎಂಬಂತೆ ಈ ಬೆಳವಣಿಗೆಗಳು ಘಟಿಸಿವೆ.

ಮೊದಲಿಗೆ ನವದೆಹಲಿಯಲ್ಲಿ ನಡೆದ ಓಎನ್‌ಜಿಸಿ ನೆಹರು ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾರತ, ಕಪ್ ಇತಿಹಾಸದಲ್ಲಿ 14 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು. ನಂತರ ಚೆನ್ನೈನಲ್ಲಿ ನಡೆದ ಏಷ್ಯಾಕಪ್ ಪುರುಷರ ಹಾಕಿಯಲ್ಲಿ ಭಾರತ ಪ್ರಶಸ್ತಿಯ ಗರಿ ಮೂಡಿಸಿಕೊಂಡರೆ, ಇದರ ಬೆನ್ನಲ್ಲೆ ಚೀನಾದ ಶಾಂಘೈನಲ್ಲಿ ನಡೆದ ಮಹಿಳೆಯರ ಏಷ್ಯಾಕಪ್ ಹಾಕಿಯಲ್ಲಿ ನಮ್ಮ ತಂಡ ಮೂರನೇ ಸ್ಥಾನವನ್ನು ಗಳಿಸಿತು.

ಭಾರತೀಯ ಕ್ರೀಡಾಭಿಮಾನಿಗಳ ಜೀವನಾಡಿಯಂತಿರುವ ಆಟವೆಂದರೆ ಕ್ರಿಕೆಟ್. ನಮ್ಮ ಕ್ರಿಕೆಟ್ ಕಲಿಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದರಿಂದ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರಾಯೋಗಿಕ ಮತ್ತು ಚೊಚ್ಚಲ ಟ್ವೆಂಟಿ20 ವಿಶ್ವಕಪ್‌ನಲ್ಲಿ ಯಾರೂ ಊಹಿಸಿರದ ಫಲಿತಾಂಶ ನೀಡಿ, ಕಪ್ ಗೆಲ್ಲುವ ಮೂಲಕ ಮತ್ತೊಮ್ಮೆ ಚಕ್ ದೇ ಇಂಡಿಯಾ ಎಂದು ಹೆಮ್ಮೆಯಿಂದ ಬೀಗಿತು.

ಇವೆಲ್ಲಾ ಟೀಮ್ ಇವೆಂಟ್‌ಗಳಾದರೆ, ವೈಯಕ್ತಿಕ ಆಟಗಳಾದ ಸ್ನೂಕರ್‌ನಲ್ಲಿ ಪಂಕಜ್ ಅದ್ವಾನಿ ಮತ್ತು ಭಾರತೀಯ ಮೂಲದ ಕ್ರೀಡೆಯಾದ ಚೆಸ್‌ನಲ್ಲಿ ಮತ್ತೊಮ್ಮೆ ಚೆಕ್(ಸ್) ದೇ ಇಂಡಿಯಾ ಎಂದ ನಮ್ಮ ಹೆಮ್ಮೆಯ ವಿಶಿ ಅರ್ಥಾತ್ ವಿಶ್ವನಾಥನ್ ಆನಂದ್, ಭಾರತೀಯ ಕ್ರೀಡಾ ಬಾವುಟವನ್ನು ಮತ್ತೊಮ್ಮೆ ದಿಗಂತದತ್ತ ದೇದೀಪ್ಯಮಾನ್ಯವಾಗಿ ಹರಡುವಂತೆ-ಹಾರಾಡುವಂತೆ ಮಾಡಿದ್ದಾರೆ.

ಇಂತಿಪ್ಪ ನಮ್ಮ ವಿಶಿ ವೃತ್ತಿ ಜೀವನದೆಡೆಗೆ ಒಂದು ಬಾರಿ ಮೇಲಕು ಹಾಕಿ ಬರೋಣ ಬನ್ನಿ.

ಭಾರತೀಯ ಚೆಸ್ ರಂಗದ ಧ್ರುವತಾರೆಯಾಗಿರುವ ವಿಶ್ವನಾಥನ್ ಆನಂದ್, ಮೂಲತ ತಮಿಳ್ನಾಡಿನ ಚೆನ್ನೈನವರು. ಬಾಲ್ಯದಿಂದಲೂ ಚೆಸ್ ಬಗ್ಗೆ ಅಪಾರ ಒಲವು ಗಳಿಸಿಕೊಂಡಿದ್ದ ಇವರು ತಮ್ಮ 18ನೇ ವಯಸ್ಸಿನಲ್ಲಿ 1988ರಲ್ಲಿ ಮೊದಲ ಬಾರಿಗೆ ಭಾರತದ ಗ್ರ್ಯಾಂಡ್ ಮಾಸ್ಟರ್‌ ಆಗಿ ಚೆಸ್ ಇತಿಹಾಸದಲ್ಲಿ ದಾಖಲಾದರು.

ಅಲ್ಲಿಂದ ತಮ್ಮ ಜೈತ್ರಯಾತ್ರೆಯನ್ನು ಮುಂದುವರಿಸಿದ ಅವರು ಇದುವರೆಗೆ ಹಿಂದಿರುಗಿ ನೋಡಿದ ಕ್ಷಣಗಳೇ ಇಲ್ಲ. 2002ರಲ್ಲಿ ಫಿಡೆ ವಿಶ್ವ ಚಾಂಪಿಯನ್ ಪಟ್ಟ. ನಂತರ 2003ರಲ್ಲಿ ಫಿಡೆ ವಿಶ್ವ ರಾಪಿಡ್ ಚೆಸ್ ಚಾಂಪಿಯನ್‌ಶಿಪ್ ಪಟ್ಟ.

ಕಳೆದ ಮೂರು ದಶಕಗಳಲ್ಲಿ ಭಾರತೀಯ ಚೆಸ್‌ನ ಅವಿಭಾಜ್ಯ ಅಂಗವಾಗಿರುವ ವಿಶಿಗೆ 1995ರಲ್ಲಿ ಗ್ಯಾರಿ ಕ್ಯಾಸ್ಪರೋವ್ ಮತ್ತು ಅನಾತೋಲಿ ಕಾರ್ಪೋವ್ ವಿರುದ್ಧದ ಜಯಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರುಗಳನ್ನು ಗಳಿಸಿಕೊಟ್ಟವು.

2000ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಕಿರೀಟವನ್ನು ಧರಿಸಿದ ಆನಂದ, ಭಾರತೀಯರೇ ಕಂಡು ಹಿಡಿದ ಆಟದಲ್ಲಿ ಸಾವಿರಾರು ವರ್ಷಗಳ ನಂತರವೂ ಭಾರತೀಯರು ಸಮರ್ಥರು ಎಂಬುದನ್ನು ತೋರಿಸಿಕೊಟ್ಟರು.

ವಿಶ್ವದ ಘಟಾನುಘಟಿ ಚೆಸ್ ಆಟಗಾರರನ್ನು ಹೊಂದಿರುವ ರಷ್ಯಾದ ಆಟಗಾರರನ್ನು ಒಂದೆಡೆ ಮಣ್ಣುಮುಕ್ಕಿಸುತ್ತಾ ಮುನ್ನಡೆದ ವಿಶ್ವನಾಥನ್, ಮೊನ್ನೆ ಮೊನ್ನೆ ಮೆಕ್ಸಿಕೊದಲ್ಲಿ ಹಂಗೆರಿಯ ಪೀಟರ್ ಲೇಕೋರನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ಮತ್ತೊಮ್ಮೆ ತಮ್ಮ ಮುಡಿಗೇರಿಸುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದರು.

37 ವರ್ಷದ ಆನಂದ್ ಅವರಲ್ಲಿ ಇನ್ನೂ ಸಾಕಷ್ಟು ಚೆಸ್ ಆಟ ಬಾಕಿ ಇದ್ದು, ಈಗ ದೊರೆತಿರುವ ಅನಭಿಷಿಕ್ತ ಪಟ್ಟ ಮುಂಬರುವ ದಿನಗಳಲ್ಲಿ ಹಾಗೆಯೆ ಮುಂದುವರಿಯಲಿ ಎನ್ನುವುದು ಕೋಟ್ಯಂತರ ಕ್ರೀಡಾಭಿಮಾನಿಗಳ ಹಾರೈಕೆಯಾಗಿದೆ.

Share this Story:

Follow Webdunia kannada