Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್: ಪೇಸ್‌ಗೆ ಭೇಷ್, ಉಳಿದವರಿಗೂ..!?

ಒಲಿಂಪಿಕ್ಸ್: ಪೇಸ್‌ಗೆ ಭೇಷ್, ಉಳಿದವರಿಗೂ..!?
ರಾಕೇಶ್ ನಡುಜಾರ್
PTI
ಅಪ್ಪಟ ಪ್ರತಿಭಾವಂತ, ಸೋಲೊಪ್ಪದ ಹೋರಾಟಗಾರ, ಭಾರತೀಯರಿಗೆ ಅಷ್ಟೊಂದು ಪರಿಚಿತವಲ್ಲದ ಆಟವನ್ನೇ ಆಯ್ದುಕೊಂಡು ಭಾರತದಲ್ಲಿ ಆ ಕ್ರೀಡೆಗೆ ಜನಪ್ರಿಯತೆ ತಂದುಕೊಟ್ಟ ಕ್ರೀಡಾಪಟು ಹೀಗೆ ಒಗಟಿನಂತೆ ಹೇಳುತ್ತಾ ಹೋದರೆ ನೂರಾರು ಆಟಗಾರರ ಹೆಸರು ನಿಮ್ಮ ಬಾಯಿಂದ ಉದುರಿಯೇ ಉದುರುತ್ತದೆ. ಆದರೆ ಅಪ್ರತಿಮ ದೇಶಪ್ರೇಮಿ ಅನ್ನಿ ಖಂಡಿತ ನಿಮ್ಮ ತುಟಿಯಂಚಿಗೆ ಬರುವ ಕೆಲವೇ ಕೆಲವು ಹೆಸರುಗಳಲ್ಲಿ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರದ್ದೂ ಒಂದು.

ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೇರಲು ಏದುಸಿರು ಬಿಡುವ ಈ ಪೇಸ್ ದೇಶಕ್ಕಾಗಿ ಆಡುವ ಡೇವಿಸ್ ಕಪ್‌ನಲ್ಲಿ ಕೆರಳಿದ ಸಿಂಹವಾಗುತ್ತಾರೆ. ಎದುರಾಳಿ ಯಾರೇ ಆಗಿದ್ದರೂ ಅಂಜದ ಗಂಡು ಎಂದೆನಿಸಿಕೊಂಡು ತಮ್ಮ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡುತ್ತಾರೆ. ಅದಕ್ಕೆ ಸಾಕ್ಷಿ ಅವರು ಡೇವಿಸ್ ಕಪ್‌ನಲ್ಲಿ ಗಳಿಸಿರುವ 81 ಗೆಲುವುಗಳು. ಅವರು ಕಳೆದುಕೊಂಡ ಪಂದ್ಯಗಳು ಕೇವಲ 30 !

ಪೇಸ್ ಜನಿಸಿದ್ದು ಗೋವಾದಲ್ಲಿ ಜೂನ್ 17, 1973 ರಂದು. ಆದರೆ ಬೆಳೆದದ್ದು ಕೋಲ್ಕತ್ತಾದಲ್ಲಿ. ಕ್ರೀಡೆ ಅವರ ರಕ್ತದಲ್ಲೇ ಬೆರೆತಿತ್ತು. ಹೇಗಂತೀರಾ? ಅವರ ತಂದೆ ವೆಸ್ ಪೇಸ್ ಅಂತಾರಾಷ್ಟ್ರೀಯ ಹಾಕಿ ಪಟು. ತಾಯಿ ಜೆನ್ನಿಫರ್ ಬಾಸ್ಕೆಟ್‌ಬಾಲ್ ಆಟಗಾರ್ತಿ. ಅದರೆ ಫಾರ್ ಎ ಚೇಂಜ್, ಲಿಯಾಂಡರ್ ತಮ್ಮ ಸಾಧನೆಗಾಗಿ ಈ ಎರಡು ಆಟವನ್ನೂ ಆಯ್ದು ಕೊಳ್ಳದೆ ಟೆನಿಸನ್ನೇ ಆರಿಸಿಕೊಂಡರು. ಮತ್ತು ತಾವು ಉಳಿದವರಿಗಿಂತ ಭಿನ್ನ ಎಂಬುದನ್ನು ಎಳವೆಯಲ್ಲೇ ಸಾರಿದರು.

ಲಿಯಾಂಡರ್ ಪೇಸ್‌ರ ಫೇಸ್‌ಗೆ ಬೆಳಕು ಬಿದ್ದದ್ದು 1990ರಲ್ಲಿ. ಅದೂ ಅವರ 16ನೇ ವಯಸ್ಸಿನಲ್ಲಿ. ಅಂದು ಪೇಸ್‌ ವಿಂಬಲ್ಡನ್ ಸಿಂಗಲ್ಸ್‌ನ ಜೂನಿಯರ್ ವಿಭಾಗದ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಅದರ ಜತೆ ಜತೆಗೆ ವಿಶ್ವದ ನಂಬರ್ 1 ಜೂನಿಯರ್ ಆಟಗಾರನ ಸ್ದಾನದಲ್ಲಿ ವಿರಾಜಮಾನರಾದರು. ಅದರೆ ಅದೇನಾಯಿತೋ... ಪೇಸ್‌ ಹಿರಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಮಿಂಚಲೇ ಇಲ್ಲ. ಅದರೆ ಆ ಕೊರತೆಯನ್ನು ಅವರು ಡಬಲ್ಸ್‌ನಲ್ಲಿ ತುಂಬಿಕೊಂಡರು.

ಹಿರಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಪೇಸ್‌ ಪಡೆದ ಅತ್ಯುತ್ತಮ ಶ್ರೇಯಾಂಕವೆಂದರೆ 73. ಅದೇ ಅವರು ಡಬಲ್ಸ್‌ನಲ್ಲಿ ತನ್ನ ಭಾರತೀಯ ಜತೆಗಾರ ಮಹೇಶ್ ಭೂಪತಿಯೊಂದಿಗೆ ಆಗ್ರ ಕ್ರಮಾಂಕ ತಲುಪಿದ್ದರು.

ಪೇಸ್‌ ತನ್ನ ಹದಿನಾರರ ಹರೆಯದಲ್ಲೇ (1990) ಡೇವಿಸ್ ಕಪ್ ರಂಗ ಪ್ರವೇಶಿಸಿದ್ದರು. ಅಲ್ಲಿಂದ ವೃತ್ತಿಪರ ಟೆನಿಸಿನಲ್ಲಿ ಅವರಿಗೆ ಹಿಂತಿರುಗಿ ನೋಡುವ ಪ್ರಮೇಯ ಬಾರದಿದ್ದರೂ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಈ ಮಾತು ಅವರ ವೈಯುಕ್ತಿಕ ಜೀವನಕ್ಕೂ ಅನ್ವಯ.

ಪೇಸ್‌ ಈ ವರೆಗೆ 38 ಡಬಲ್ಸ್‌ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಅದರಲ್ಲಿ 4 ಡಬಲ್ಸ್‌ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳೂ ಸೇರಿವೆ. ಮತ್ತು 3 ಮಿಕ್ಸೆಡ್ ಡಬಲ್ಸ್‌ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳು ಅವರ ಜೋಳಿಗೆಯಲ್ಲಿವೆ. ಈ ಲೆಕ್ಕದಲ್ಲಿ ಲೆಕ್ಕ ಹಾಕಿದರೆ ಪೇಸ್‌‌ರ ಯಶಸ್ವಿ ಜತೆಗಾರ ಭಾರತಿಯರೇ ಆದ ಮಹೇಶ್ ಭೂಪತಿ. ಇನ್ನು ಮಿಕ್ಸೆಡ್ ಡಬಲ್ಸ್‌ನಲ್ಲಿ ಮಹಿಳಾ ಟೆನಿಸಿನ ದಂತಕಥೆ ಮಾರ್ಟಿನಾ ನವ್ರಾಟಿಲೋವಾ.

ಇವರ ಸಾಮರ್ಥ್ಯಕ್ಕೆ ಮತ್ತೊಂದು ಕೈಗನ್ನಡಿಯೆಂದರೆ ಆವೆ ಅಥವಾ ಹುಲ್ಲು ಹಾಸಿನ ಅಂಕಣ ಎರಡಲ್ಲೂ ಹೆಚ್ಚು ಕಡಿಮೆ ಇವರ ಪ್ರದರ್ಶನ ಒಂದೆ ರೀತಿಯಿದೆ. ಅದರೂ ಅವೆಯಂಗಣದಲ್ಲಿ ಇವರದ್ದು ಒಂದು ಕೈ ಮಿಗಿಲು ಎನ್ನುವ ಸಾಧನೆ.

ಅದೇನೇ ಇದ್ದರೂ ಸಿಂಗಲ್ಸ್‌ನಲ್ಲಿ ಇವರ ಸಾಧನೆ ಅಷ್ಟಕಷ್ಟೇ. ಇಷ್ಟರವರೆಗೆ ಇವರಿಗೆ ದಕ್ಕಿರುವುದು ಕೇವಲ ಒಂದೇ ಒಂದು ಎಟಿಪಿ ಪ್ರಶಸ್ತಿ, ಮತ್ತೆ 11 ಚಾಲೆಂಜರ್ ಕಿರೀಟಗಳು.

ಅದರೂ ಪೇಸ್‌ ನಮಗೆ ಹತ್ತಿರವಾಗುವುದು, ಮಹಾನ್ ಎನಿಸಿಕೊಳ್ಳುವುದು ಮತ್ತು ಇತಿಹಾಸದ ಪುಟಗಳಲ್ಲಿ ಆಚ್ಚಳಿಯದೇ ಉಳಿಯುವುದು ಅವರ ಆ ಒಂದು ಗೆಲುವಿಗಾಗಿ. ಆ ಗೆಲುವು ಕೇವಲ ಅವರೊಬ್ಬರ ಗೆಲುವಾಗಿರಲಿಲ್ಲ. ಅದು 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಭಾರತ ಭಾಗವಹಿಸಿತ್ತು ಎಂಬುದರ ಏಕೈಕ ಕುರುಹು ಮತ್ತು 197 ದೇಶಗಳ ಸ್ಪರ್ಧಾಳುಗಳಿದ್ದ ಆ ಟೂರ್ನಿಯ ಪದಕ ಪಟ್ಟಿಯಲ್ಲಿ ಮೂಲೆಯಲ್ಲೆಲ್ಲೋ ಭಾರತದ ಹೆಸರೂ ಕಾಣಿಸಿಕೊಳ್ಳುವಂತೆ ಮಾಡಿದಂತಹ ಗೆಲುವದು.

ಅಂದು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದ ಪೇಸ್‌ ವಿಶ್ವದ ಅತ್ಯುನ್ನತ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ ಏಕಮಾತ್ರ ಪದಕದ ಒಡೆಯರಾಗಿದ್ದರು. ಆದೂ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನ ಕುಸ್ತಿ ವಿಭಾಗದಲ್ಲಿ ಕೆ. ಡಿ. ಜಾಧವ್ ಕಂಚಿನ ಪದಕ ಜಯಿಸಿದ 44 ವರ್ಷಗಳ ನಂತರ ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ "ಮಹಾನ್" ಭಾರತದ ಮಡಿಲಿಗೆ ಬಿದ್ದ ಮೊದಲ ಪದಕ. ಅಂದು ಸೆಮಿ ಫೈನಲ್‌ನಲ್ಲಿ ಆಂದ್ರೆ ಆಗಾಸ್ಸಿಗೆ ಮಣಿಯುವ ಮೊದಲು ಪೇಸ್‌ ಕಳೆದುಕೊಂಡಿದ್ದೂ ಒಂದೇ ಒಂದು ಸೆಟ್.

ಪೇಸ್ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿರುವುದು ಗಮನಾರ್ಹ.

ಇದೀಗ ಹೇಶ್ - ಪೇಸ್‌ ಜೋಡಿ ತಮ್ಮಲ್ಲಿದ್ದ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಒಂದಾಗಿ ಆಡಲಿದ್ದು ಸಕಲ ಭಾರತೀಯರಲ್ಲೂ ಪದಕದ ಅಸೆ ಹುಟ್ಟಿಸಿದೆ.

ಈ ಬಾರಿಯ ಒಲಿಂಪಿಕ್ಸ್‌‌ನಲ್ಲಿ ಭಾರತದ 57 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಅವರಲ್ಲಿ ಸಾಕಷ್ಟು ಮಂದಿ ಅರ್ಹತೆ ಗಳಿಸುವಷ್ಟಾರಲ್ಲೇ ಹೈರಾಣಾಗಿದ್ದಾರೆ. ಅವರಿಗೆ ಒಲಿಂಪಿಕ್ಸ್‌‌ನಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಪುಣ್ಯ.

ನೀವು ತೀರಾ ಆಶಾವಾದಿಯಾಗಿದ್ದೇ ಆದರೆ, ಇದ್ದುದರಲ್ಲಿ ಶೂಟಿಂಗ್ ತಂಡದ ಬಗ್ಗೆ ಒಂಚೂರು ಭರವಸೆ ಇಡಬಹುದು ಅಷ್ಟೇ.

ಅದರೂ ನಾನು ಈ ಪೇಸ್‌ ಪುರಾಣವನ್ನು ಯಾಕೆ ನಿಮ್ಮ ಮುಂದೆ ಬಿಚ್ಚಿಟ್ಟದ್ದೆಂದರೆ, 'ನಾನಿಲ್ಲಿ ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದು ನನ್ನಿಂದ ದೇಶ ನಿರೀಕ್ಷಿಸುತ್ತಿರುವುದು ಒಂದೇ ಒಂದು ಪದಕ, ಅದನ್ನು ನಾನು ಗಳಿಸಲೇ ಬೇಕು' ಎಂಬ ಛಲ ಹೊತ್ತುಕೊಂಡರೆ, ಮನದಲ್ಲಿ, ಹೃದಯದಲ್ಲಿ ದೇಶಭಕ್ತಿಯ ಕಿ(ಕೆ)ಚ್ಚು ಹೊತ್ತಿಸಿಕೊಂಡರೆ ಅದು ಈ ಎಲ್ಲ 57 ಕ್ರೀಡಾಳುಗಳು ತಮ್ಮ ಸಾಮರ್ಥ್ಯದ ಬೆಂಕಿಗೆ ಎರೆದುಕೊಳ್ಳುವ ತುಪ್ಪವಿದ್ದಂತೆ.

ಗೆಲ್ಲದಿದ್ದರೂ ಪರವಾಗಿಲ್ಲ, 2004ರ ಅಥೆನ್ಸ್ ಒಲಿಂಪಿಕ್ಸ್‌ನ ಹೆಪ್ಟಾತ್ಲಾನ್ ವಿಭಾಗದಲ್ಲಿ ಕನ್ನಡಿತಿ ಜೆ.ಜೆ. ಶೋಭಾ ನೀಡಿದಂತಹ ವೀರೋಚಿತ ಹೋರಾಟವನ್ನು ಹೊಮ್ಮಿಸಿ.

ಅವರಿಗೆ ಬೆಸ್ಟ್ ಅಫ್ ಲಕ್ ಹೇಳುವ ಮೊದಲು ಹೇಳಬೇಕೆನಿಸಿದ್ದು. ನೀವು ಪದಕ ಜಯಿಸಿದರೆ ಇತಿಹಾಸ ನಿರ್ಮಿಸುತ್ತೀರಿ... ಇಲ್ಲಾ ಕಾಲಗರ್ಭದಲ್ಲಿ ಹುದುಗಿ ಹೋಗುತ್ತೀರಿ.

Share this Story:

Follow Webdunia kannada