Select Your Language

Notifications

webdunia
webdunia
webdunia
webdunia

ಇಂದಿನಿಂದ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ; ಶುಕ್ರವಾರ ಉದ್ಘಾಟನಾ ಸಮಾರಂಭ

ಇಂದಿನಿಂದ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ; ಶುಕ್ರವಾರ ಉದ್ಘಾಟನಾ ಸಮಾರಂಭ
ಜಪಾನ್ , ಬುಧವಾರ, 21 ಜುಲೈ 2021 (12:37 IST)
ಟೋಕಿಯೋ, ಜಪಾನ್ (ಜುಲೈ 21): ಕೊರೋನಾ ಬಿಕ್ಕಟ್ಟಿನಿಂದ ಒಂದು ವರ್ಷ ವಿಳಂಬವಾಗಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಇಂದು ಆರಂಭಗೊಂಡಿತು. ಆತಿಥೇಯ ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಸಾಫ್ಟ್ ಬಾಲ್ ಪಂದ್ಯದ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿತು.

2011ರ ಸುನಾಮಿ ಮತ್ತು ಪರಮಾಣು ದುರಂತದಲ್ಲಿ ಭಾರೀ ಸಂಕಷ್ಟಕ್ಕೀಡಾಗಿದ್ದ ಫುಕುಶಿಮಾ ಎಂಬ ಪ್ರದೇಶದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರು 8-1ರಿಂದ ಗೆದ್ದು ಬೀಗಿದರು. ಒಲಿಂಪಿಕ್ಸ್ ಕ್ರೀಡಾಕೂಟ ಇಂದು ಆರಂಭವಾದರೂ ಅಧಿಕೃತವಾಗಿ ಚಾಲನೆಗೊಳ್ಳುವುದು ಜುಲೈ 23, ಶುಕ್ರವಾರದಂದು. ಅಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಜುಲೈ 24ರಿಂದ ಪೂರ್ಣಪ್ರಮಾಣದಲ್ಲಿ ಕ್ರೀಡಾಕೂಟ ನಡೆಯಲಿದೆ. ಆಗಸ್ಟ್ 8ರವರೆಗೆ ನಡೆಯಲಿರುವ ಈ ಮಹಾ ಕ್ರೀಡಾಕೂಟದಲ್ಲಿ 206 ದೇಶಗಳಿಂದ 11 ಸಾವಿರಕ್ಕೂ ಹೆಚ್ಚು ಅಥ್ಲೀಟ್ಗಳು ಮತ್ತು ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.
ಇಂದು ಮತ್ತು ನಾಳೆ ಸಾಫ್ಟ್ ಬಾಲ್ ಮತ್ತು ಫುಟ್ಬಾಲ್ ಕ್ರೀಡೆಯ ಕೆಲ ಪಂದ್ಯಗಳು ನಡೆಯಲಿವೆ. 2008ರ ನಂತರ ಸಾಫ್ಟ್ಬಾಲ್ ಕ್ರೀಡೆ ಒಲಿಂಪಿಕ್ಸ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಕಳೆದ ಒಲಿಂಪಿಕ್ಸ್ನಲ್ಲಿ ಆಡಿಸಲಾಗಿದ್ದ ಕ್ಯಾನೋ, ಮಾಡರ್ನ್ ಪೆಂಟಾಥ್ಲಾನ್, ಟೇಕ್ವಾಂಡೋವನ್ನು ಈ ಬಾರಿ ಕೈಬಿಡಲಾಗಿದೆ. ಸಾಫ್ಟ್ಬಾಲ್, ಸ್ಕ್ವಾಶ್, ಸರ್ಫಿಂಗ್, ಕರಾಟೆ, ರೋಲರ್ ಸ್ಪೋರ್ಟ್ಸ್, ಕ್ಲೈಂಬಿಂಗ್, ವೇಕ್ ಬೋರ್ಡಿಂಗ್, ವುಶು, ಮ್ಯಾಡಿಸನ್ ಸೈಕ್ಲಿಂಗ್, 3ಘಿ3 ಬ್ಯಾಸ್ಕೆಟ್ಬಾಲ್, ಫ್ರೀಸ್ಟೈಲ್ ಬಿಎಂಎಕ್ಸ್ ಕ್ರೀಡೆಗಳು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ಗೆ ದಾರಿ ಪಡೆದಿವೆ. ಭಾರತೀಯರು ಉತ್ತಮ ಪ್ರದರ್ಶನ ನೀಡುತ್ತಿರುವ ಕುಸ್ತಿ ಕ್ರೀಡೆಯನ್ನ ಕೈಬಿಡುವ ಸಾಧ್ಯತೆಯೂ ಇತ್ತು. ಆದರೆ, ಅಂತಿಮವಾಗಿ ಕುಸ್ತಿ, ಬೇಸ್ಬಾಲ್ ಮತ್ತು ಸ್ಕ್ವಾಶ್ ಕ್ರೀಡೆಗಳು ಒಲಿಂಪಿಕ್ಸ್ನಲ್ಲಿ ಜೀವ ಉಳಿಸಿಕೊಂಡಿವೆ.
ಒಟ್ಟು 206 ದೇಶಗಳ ಕ್ರೀಡಾಪಟುಗಳು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಮೆರಿಕದಿಂದ ಅತಿ ಹೆಚ್ಚು, ಅಂದರೆ 613 ಸ್ಪರ್ಧಿಗಳಿದ್ದಾರೆ. ಆತಿಥೇಯ ಜಪಾನ್ ದೇಶದ 552 ಸ್ಪರ್ಧಾಳುಗಳು ಕಣದಲ್ಲಿದ್ದಾರೆ. ರಷ್ಯಾ, ಬ್ರಜಿಲ್, ಆಸ್ಟ್ರೇಲಿಯಾ, ಚೀನಾ, ಜರ್ಮನಿ, ಬ್ರಿಟನ್, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಕೆನಡಾ ಮತ್ತು ದಕ್ಷಿಣ ಕೊರಿಯಾ ದೇಶಗಳಿಂದ 200ಕ್ಕೂ ಹೆಚ್ಚು ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ಧಾರೆ.
ಭಾರತದಿಂದ 120 ಕ್ರೀಡಾಪಟುಗಳು ತೆರಳಿದ್ದಾರೆ. 1900ರಿಂದಲೂ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಇದೂವರೆಗೆ ಅತಿ ಹೆಚ್ಚು ಸ್ಪರ್ಧಿಗಳನ್ನ ಕಳುಹಿಸಿದ್ದು ಈ ಬಾರಿಯೇ. ಹೆಚ್ಚು ಪದಕಗಳನ್ನ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ ಇದೆ. ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಕ್ರಮವಾಗಿ 10, 9 ಮತ್ತು 6 ಸ್ಪರ್ಧಿಗಳನ್ನ ಟೋಕಿಯೋಗೆ ಕಳುಹಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್ ನಲ್ಲಿ ಭಾರತೀಯರಿಗೆ ಊಟದ್ದೇ ಚಿಂತೆ