Select Your Language

Notifications

webdunia
webdunia
webdunia
webdunia

ಶೌರ್ಯದ ಕಥೆ 'ವೀರ್‌'ನಲ್ಲಿ ಸಲ್ಮಾನ್ ಖಾನ್ ಹೊಸ ಲುಕ್!

ಶೌರ್ಯದ ಕಥೆ 'ವೀರ್‌'ನಲ್ಲಿ ಸಲ್ಮಾನ್ ಖಾನ್ ಹೊಸ ಲುಕ್!
IFM
ಸಲ್ಮಾನ್ ಖಾನ್ ಈಗ ಹೊಸ ರೂಪದಲ್ಲಿ ಬರುತ್ತಿದ್ದಾರೆ. 'ವೀರ್' ಚಿತ್ರದ ಸ್ಟಿಲ್‌ಗಳು ಈಗಾಗಲೇ ಸಲ್ಮಾನ್ ಖಾನ್ ಅವರ ಹೊಸ ರೂಪವನ್ನು ದರ್ಶಿಸಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

'ವೀರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಪಿಂಡಾರಿ ಪರಾಕ್ರಮಿ ಸೈನಿಕ. ಶೌರ್ಯ, ಪ್ರತಾಪದಲ್ಲಿ ಆತನನ್ನು ಮೆಟ್ಟಿ ನಿಲ್ಲುವವರಾರೂ ಇಲ್ಲ. ಆದರೆ ಪ್ರೀತಿಯ ವಿಷಯದಲ್ಲಿ ಈತ ಹೂವಿನಂತೆ ಮೃದು ಹೃದಯಿ. ಬ್ರಿಟೀಷರ ಕಾಲದ ಒಡೆದು ಆಳುವ ನೀತಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು, ಚಿತ್ರದಲ್ಲಿ ಪ್ರೀತಿಯ ಉತ್ಕಟತೆಯನ್ನೂ ಹದವಾಗಿ ಬೆರೆಸಲಾಗಿದೆ. ಪಿಂಡಾರಿ ವೀರನಾದ ವೀರ್ ತನ್ನ ವೈರಿಯ ಮಗಳಾದ ಯಶೋಧರಾಳನ್ನು ಗಾಢವಾಗಿ ಪ್ರೀತಿಸುವ ಕಥೆ ಚಿತ್ರದಲ್ಲಿದೆ.

ಪ್ರೀತಿ ಹಾಗೂ ಪರಾಕ್ರಮ ಇವುಗಳತ್ತ ಚಿತ್ರದ ಕಥೆ ಹೆಚ್ಚು ವಾಲುತ್ತದೆ. ಪರಾಕ್ರಮದಲ್ಲಿ ನಿಯತ್ತು, ನಿಷ್ಠೆ, ಜವಾಬ್ದಾರಿಗಳು ಮೇಳೈಸುತ್ತವೆ. ಇದು ಸಲ್ಮಾನ್ ಖಾನ್ ಅವರ 20 ವರ್ಷದ ಕನಸಿನ ಕೂಸು. ಇಂಥ ಸನ್ನಿವೇಶ ಹೊಂದಿದ ಚಿತ್ರವೊಂದರಲ್ಲಿ ನಟಿಸುವುದು ಸಲ್ಮಾನ್ ಕನಸು. ಈಗ ಸಲ್ಮಾನ್ ಕನಸು ನನಸಾಗಿದೆ. ಚಿತ್ರದಲ್ಲಿ ಖ್ಯಾತ ನಟರಾದ ಮಿಥುನ್ ಚಕ್ರವರ್ತಿ, ಜಾಕಿಶ್ರಾಫ್ ಇದ್ದಾರೆ. ಸಲ್ಮಾನ್ ತಮ್ಮ ಸೊಹೈಲ್ ಖಾನ್ ಕೂಡಾ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ನಾಯಕಿಯರಾಗಿ ಝರೀನ್ ಖಾನ್, ಮಿಸ್ ಇಂಗ್ಲೆಂಡ್ ಖ್ಯಾತಿಯ ಲೀಸಾ ಲಝಾರಸ್ ಅಭಿನಯಿಸುತ್ತಿದ್ದಾರೆ.
webdunia
IFM



ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿದ್ದು, ತನ್ನ ವಿಶೇಷ ಲುಕ‌್‌ಗಾಗಿ ಸಲ್ಮಾನ್ ಖಾನ್ ಸಾಕಷ್ಟು ಶ್ರಮಿಸಿದ್ದಾರೆ. ಈವರೆಗೆ ಸಲ್ಮಾನ್ ಖಾನ್ ಕಂಡ ಲುಕ್‌ಗಳಿಗಿಂತ ಇದು ಡಿಫರೆಂಟ್ ಲುಕ್ ಆಗಿದ್ದು, ವಿಶೇಷವಾಗಿ ಕಂಗೊಳಿಸಿದ್ದಾರೆ.

ಚಿತ್ರದಲ್ಲಿ ಗುಲ್ಜಾರ್ ಸಾಹಿತ್ಯದಲ್ಲಿ ಸಾಜಿದ್ ವಾಜಿದ್ ಸಂಗೀತ ನೀಡಿದ್ದಾರೆ. ವಿಜಯ್ ಗಲಾನಿ ನಿರ್ಮಿಸಿದ್ದಾರೆ. ಅನಿಲ್ ಶರ್ಮಾ ನಿರ್ದೇಶನದ ಐತಿಹಾಸಿಕ ಕಥೆಯುಳ್ಳ ಈ 'ವೀರ್' ಚಿತ್ರ 2010ರ ಜನವರಿ 22ರಂದು ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ.

Share this Story:

Follow Webdunia kannada