Select Your Language

Notifications

webdunia
webdunia
webdunia
webdunia

ಅಶ್ವಿನಿ ಪುನೀತ್ ವಿರುದ್ಧ ಆಕ್ಷೇಪಾರ್ಹ ಫೋಸ್ಟ್, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಅಶ್ವಿನಿ ಪುನೀತ್ ವಿರುದ್ಧ ಆಕ್ಷೇಪಾರ್ಹ ಫೋಸ್ಟ್, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

Sampriya

ಬೆಂಗಳೂರು , ಭಾನುವಾರ, 7 ಏಪ್ರಿಲ್ 2024 (10:16 IST)
ಬೆಂಗಳೂರು: ಕರ್ನಾಟಕ ರತ್ನ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹಾಕಿದ್ದ ಆಕ್ಷೇಪಾರ್ಹ ಹೇಳಿಕೆ ಕುರಿತು ತೀವ್ರ ಚರ್ಚೆಯಾಗುತ್ತಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ವಾರ್ನಿಗ್‌ ನೀಡಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸತತ ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣ. ಅವರನ್ನು ಆರ್‌ಸಿಬಿ ಈವೆಂಟ್ ಗೆ ಕರೆಸಬಾರದಿತ್ತು ಎನ್ನುವ ಕೀಳುಮಟ್ಟದ ಪೋಸ್ಟ್ ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಗಜಪಡೆ ಎಂಬ ಅಕೌಂಟ್​ನಿಂದ ಈ ಫೋಸ್ಟ್ ಮಾಡಲಾಗಿದ್ದು, ಸಾರ್ವಜನಿಕರು ತೀವ್ರವಾಗಿ ಖಂಡಿಸುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಹೆಣ್ಣಿಗೆ ಸ್ವಾತಂತ್ರ್ಯವನ್ನು ನಿರಾಕರಿಸಿ ಗುಲಾಮಳನ್ನಾಗಿ ಮಾಡಿ ಮನೆಯೊಳಗೆ ಕೂರಿಸಿದ ಮನುವಾದದ ಸಂಕೋಲೆಯನ್ನು ಮಹಿಳೆಯರೇ ಕಿತ್ತುಹಾಕಿ ಸ್ವತಂತ್ರರಾಗುತ್ತಿದ್ದಾರೆ. ಸಂವಿಧಾನದತ್ತ ಸ್ವಾತಂತ್ರ್ಯದೊಂದಿಗೆ ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದ್ದಾರೆ. ಪತಿಯನ್ನು ಕಳೆದುಕೊಂಡು ಹೆಣ್ಣುಮಕ್ಕಳು ಕೂಡಾ ವೈಯಕ್ತಿಕ ಬದುಕಿನ ನೋವುಗಳನ್ನು ನುಂಗಿಕೊಂಡು ಸಾಮಾಜಿಕ ಮತ್ತು ಔದ್ಯಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗುತ್ತಿದ್ದಾರೆ. ಈ ಸಾಮಾಜಿಕ ಬದಲಾವಣೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರಂತಹ ಮಹನೀಯರ ಸಮಾಜ ಸುಧಾರಣೆಯ ಕೊಡುಗೆಯೂ ಇದೆ ಎಂದಿದ್ದಾರೆ

ಹೀಗಿದ್ದರೂ ಇತಿಹಾಸದ ಚಕ್ರವನ್ನು ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನವನ್ನು ಕೆಲವು ಕಿಡಿಗೇಡಿಗಳು ನಡೆಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಗೊಡ್ಡು ಸಂಪ್ರದಾಯವಾದಿಗಳು ಪತಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಅಪಮಾನಿಸಿ ತಮ್ಮ ವಿಕೃತಿಯನ್ನು ಮೆರೆಯುತ್ತಿರುವುದು ಖಂಡನೀಯ. ಇದು ಸಂವಿಧಾನವನ್ನು ತಿರಸ್ಕರಿಸಿ ಮನುವಾದವನ್ನು ಪುರಸ್ಕರಿಸಬೇಕೆಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಹಾಕುತ್ತಿರುವ ಕೂಗಿನ ಫಲ ಎಂದು ಅವರು ಬರೆದಿದ್ದಾರೆ.

ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಎಂದಿಗೂ ಸಹಿಸುವುದಿಲ್ಲ. ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಟ್ವೀಟ್​ನಲ್ಲಿ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕೆ ಕ್ಷೇತ್ರದಲ್ಲಿ ಬರೋಬ್ಬರಿ ₹146.01 ಕೋಟಿ ಆದಾಯ: ರಾಜ್ಯದಲ್ಲೇ ಅಗ್ರಸ್ಥಾನ