Select Your Language

Notifications

webdunia
webdunia
webdunia
webdunia

ಅರೆಬೆಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ: ಕುಮಾರಸ್ವಾಮಿ

ಅರೆಬೆಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ: ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 12 ಸೆಪ್ಟಂಬರ್ 2023 (08:20 IST)
ಬೆಂಗಳೂರು : ಖಾಸಗಿ ಸಾರಿಗೆಯನ್ನೇ ನಂಬಿ ಜೀವನ ನಡೆಸುತ್ತಿರುವವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಅಡ್ಡ ಪರಿಣಾಮದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರ್ಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ. ಬದುಕಿಗೆ ಗ್ಯಾರಂಟಿ ಕೊಡಿ ಎಂದು ಅವರು ಆಗ್ರಹಪಡಿಸಿದ್ದಾರೆ.

ಸಾಲಸೋಲ ಮಾಡಿ ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಸರ್ಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರ್ಕಾರ ಹಾಳು ಮಾಡಿದೆ. ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. 

ಈ ಬಂದ್ ನಿಂದ ಸರ್ಕಾರಿ ಸಾರಿಗೆಗೆ ಪರ್ಯಾಯವಾಗಿದ್ದ ಖಾಸಗಿ ಸಾರಿಗೆ ಜಾಲ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ ಆಗಿದೆ.

ಸರ್ಕಾರವು ಖಾಸಗಿ ಸಾರಿಗೆ ಒಕ್ಕೂಟದವರ ಬೇಡಿಕೆಗಳನ್ನು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯತೆಯಿಂದ ಪರಿಶೀಲಿಸಬೇಕು. ಅವರ ಬೇಡಿಕೆಗಳು ಈಡೇರಿಸಲಾಗದ ಅಸಾಧ್ಯ ಡಿಮ್ಯಾಂಡ್ಗಳಲ್ಲ. ಅವರಿಗೂ ಕುಟುಂಬಗಳಿವೆ, ತಂದೆತಾಯಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಸರ್ಕಾರ ಮರೆಯಬಾರದು ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಂದ್ ವೇಳೆ ಕಾನೂನು ಉಲ್ಲಂಘನೆ : 13 ಕೇಸ್, 12 ಮಂದಿ ಅರೆಸ್ಟ್