Select Your Language

Notifications

webdunia
webdunia
webdunia
webdunia

ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಮೊಳಕೆಯಲ್ಲೇ ಚಿವುಟಿದ ಮತದಾರ

ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಮೊಳಕೆಯಲ್ಲೇ ಚಿವುಟಿದ ಮತದಾರ

ನಾಗೇಂದ್ರ ತ್ರಾಸಿ

, ಸೋಮವಾರ, 26 ಮೇ 2008 (15:13 IST)
ಸಾಕಷ್ಟು ಕುತೂಹಲ ಕೆರಳಿಸಿ, ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದು ಬಿಂಬಿಸಲಾಗಿದ್ದ ಕರ್ನಾಟಕ ರಾಜ್ಯ ವಿಧಾನ ಸಭೆ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಮುಕ್ತಾಯದೊಂದಿಗೆ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರದೊಂದಿಗೆ ಪ್ರವೇಶಿಸಿದೆ. ಈ ಬಾರಿಯ ಚುನಾವಣಾ ಕಣದಲ್ಲಿ ಹಲವಾರು ಘಟಾನುಘಟಿಗಳು ಅದರಲ್ಲಿಯೂ ಕಾಂಗ್ರೆಸ್ ಪಕ್ಷದ ನಾಯಕರು ಜನರಿಂದ ತಿರಸ್ಕೃತಗೊಂಡಿದ್ದಾರೆ.

2004ರ ವಿಧಾನ ಸಭಾ ಚುನಾವಣೆಯಲ್ಲಿ 79 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಭಾರತೀಯ ಜನತಾ ಪಕ್ಷವು ಈ ಬಾರಿಯ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿದ್ದರೂ 110 ಸ್ಥಾನಗಳನ್ನು ಪಡೆದಿದೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷದ ಬಂಡಾಯ ಅಭ್ಯರ್ಥಿಗಳನ್ನು ತನ್ನ ತೆಕ್ಕೆಗೆ ಪುನಃ ತೆಗೆದುಕೊಂಡಲ್ಲಿ ಅಧಿಕಾರ ಸುಲಭವಾಗಿ ಕೈಗೆ ಸಿಗಬಹುದು.

ಕಳೆದ ಬಾರಿಯ ಚುನಾವಣೆಗೆ ಹೋಲಿಸಿದಲ್ಲಿ ಸ್ಥಾನ ಗಳಿಕೆಯಲ್ಲಿ ಶೇ 32 ರಷ್ಟು ಹೆಚ್ಚಳ ಕಂಡುಬಂದಿದೆ. ಇದೇ ರೀತಿ ಕಾಂಗ್ರೆಸ್ ಕೇವಲ 80 ಸ್ಥಾನಗಳನ್ನು ಪಡೆದಿದ್ದರೂ 2004ರ ಚುನಾವಣೆಗೆ ಹೋಲಿಸಿದಲ್ಲಿ ಶೇ 12 ರಷ್ಟು ಹೆಚ್ಚು ಸ್ಥಾನಗಳನ್ನು ಕಬಳಿಸಲು ಸಮರ್ಥವಾಗಿದೆ. ಮೊದಲು ಕಾಂಗ್ರೆಸ್ ನಂತರ ಭಾರತೀಯ ಜನತಾ ಪಕ್ಷದೊಂದಿಗೆ ಅಧಿಕಾರ ಅನುಭವಿಸಿದ್ದ ದೇವೆಗೌಡರ ಜೆಡಿಎಸ್ ಈ ಬಾರಿಯ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸದಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ದೇವೆ ಗೌಡರು ಈಗ ಏನಿದ್ದರೂ ಮುಖ್ಯಮಂತ್ರಿಗಳಿಗೆ ಮತ್ತು ಪತ್ರಿಕಾ ಹೇಳಿಕೆಗಳಿಗೆ ಮಾತ್ರ ತಮ್ಮನ್ನು ಸಿಮೀತಗೊಳಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಮತದಾರ ತಂದೊಡ್ಡಿದ್ದಾನೆ. ಕಳೆದ ಬಾರಿ 58 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ನಿರೀಕ್ಷೆಯಂತೆ ಈ ಬಾರಿ 28 ಸ್ಥಾನಗಳನ್ನು ಮಾತ್ರ ಪಡೆಯುವ ಮೂಲಕ ತನ್ನ ಸ್ಥಾನ ಗಳಿಕೆಯಲ್ಲಿ ಶೇ 27ರಷ್ಟು ಕುಸಿತ ಅನುಭವಿಸಿದೆ. ವಿಚಿತ್ರ ಎಂದರೆ ಜೆಡಿಎಸ್‌ನಿಂದ ಹೊರಬಂದು ಬೇರೆ ಪಕ್ಷಗಳಿಗೆ ವಲಸೆ ಹೋದ ಪ್ರಮುಖ ನಾಯಕರು ಬಿಜೆಪಿಯಿಂದ ಆಗಲಿ ಕಾಂಗ್ರೆಸ್‌ನಿಂದ ಆಗಲಿ ಗೆಲುವು ಕಂಡಿಲ್ಲ. ಕರ್ನಾಟಕದಲ್ಲಿ ತಲೆ ಎತ್ತುತ್ತಿದ್ದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಮೊಳಕೆಯಲ್ಲಿ ಮತದಾರ ಚಿವುಟಿ ಹಾಕಿದ್ದಾನೆ. ಪುನಃ ಮತ್ತೊಮ್ಮೆ ಕರ್ನಾಟಕದಲ್ಲಿ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆ 80ರ ದಶಕದಲ್ಲಿ ಇದ್ದಂತೆ ಅಸ್ತಿತ್ವಕ್ಕೆ ಬರಬಹುದು. ಜೆಡಿಎಸ್ ಪೂರ್ಣ ನಿರ್ಣಾಮವಾಗದಿದ್ದರೂ ಅಲ್ಲಲ್ಲಿ ತನ್ನ ಅಸ್ತಿತ್ವವನ್ನು ನಾಯಕರ ವೈಯಕ್ತಿಕ ವರ್ಚಸ್ಸಿನ ನೆಲೆಯಲ್ಲಿ ಉಳಿಯಬಹುದು.

ಪ್ರಾದೇಶಿಕವಾಗಿ ಈ ಬಾರಿಯ ಚುನಾವಣೆಯಲ್ಲಿ ಬಲಾಬಲಗಳ ಮಟ್ಟದಲ್ಲಿ ಸಾಕಷ್ಟು ಏರಿಳಿತ ಕಂಡಿದೆ. ಬೆಂಗಳೂರು ವಲಯದಲ್ಲಿ ಭಾರತೀಯ ಶೇ 7 ರಷ್ಟು ಹೆಚ್ಚು ಸ್ಥಾನ ಅಥವಾ ಒಟ್ಟಾರೆ 19 ವಿಧಾನ ಸಬಾ ಕ್ಷೇತ್ರಗಳನ್ನು ಬಗಲಿಗೆ ಹಾಕಿಕೊಂಡಿದ್ದರೆ, ಕಾಂಗ್ರೆಸ್ ಶೇ ಎರಡರಷ್ಟು ವಿಧಾನ ಸಭಾ ಸ್ಥಾನಗಳನ್ನು ಕಳೆದುಕೊಂಡಿದೆ. ಒಟ್ಟಾರೆ ಕಾಂಗ್ರೆಸ್ ಪಕ್ಷಕ್ಕೆ ಈ ವಲಯದಿಂದ ದಕ್ಕಿದ್ದು 14 ಸ್ಥಾನ ಮಾತ್ರ. ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಬೆಂಗಳೂರು ವಲಯದಲ್ಲಿ ಕ್ರಮವಾಗಿ ಶೇ 2ಮತ್ತು ಶೇ 3 ರಷ್ಟು ಸ್ಥಾನಗಳನ್ನು ನೇರವಾಗಿ ಭಾರತೀಯ ಜನತಾ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ. ಒಕ್ಕಲಿಗ ಸಮುದಾಯ ಹೆಚ್ಚಿರುವ ಈ ವಲಯ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭದ್ರಕೋಟೆಗಳಾಗಿದ್ದು, ಕೋಟೆಯಲ್ಲಿ ಬಿರುಕು ಕಂಡು ಬಂದಿದೆ.

ಕೇಂದ್ರೀಯ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಬರುವ ಶಿವಮೊಗ್ಗ. ಡಾವಣಗೇರೆ, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಪಕ್ಷೇತರರಿಗೆ ಅವಕಾಶವೇ ಇಲ್ಲ. ಇಲ್ಲಿ ಏನಿದ್ದರೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ. ಮೂರು ಪಕ್ಷಗಳ ಹಣಾಹಣಿಯಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಬಾಚಿಕೊಂಡಿದ್ದು ಬಿಜೆಪಿ. ಬಂಗಾರಪ್ಪ ಅವರ ವೈಯಕ್ತಿಕ ವರ್ಚಸ್ಸು ಇಲ್ಲಿ ತಮ್ಮದೇ ಪಕ್ಷದ ಉಪಯೋಗಕ್ಕೂ ಹೋಗಲಿ ತಮ್ಮ ಸ್ವಂತಕ್ಕೂ ಬರಲಿಲ್ಲ. ಕಳೆದ ಬಾರಿ 18 ಸ್ಥಾನಗಳನ್ನು ಬಾಚಿಕೊಂಡಿದ್ದ ಭಾರತೀಯ ಜನತಾ ಪಕ್ಷದ ಲೆಕ್ಕ ಈ ಬಾರಿ 30ಕ್ಕೆ ತಲುಪಿರುವುದು. ಈ ವಲಯದ ಲಿಂಗಾಯತ ಮತಗಳು ಭಾರತೀಯ ಜನತಾ ಪಕ್ಷವನ್ನು ತೋರೆದಿಲ್ಲ. ಒಟ್ಟಾರೆ ಕೇಂದ್ರ ಕರ್ನಾಟಕದಲ್ಲಿ ಬಿಜೆಪಿಯ ಸಾಧನೆಯಲ್ಲಿ ಶೇ 12ರಷ್ಟು ಏರು ಮುಖ ಕಂಡಿದೆ. ಜೆಡಿಎಸ್ ಮಾತ್ರ ಕೇಂದ್ರ ಕರ್ನಾಟಕದ ಪ್ರದೇಶದ ಮೇಲಿನ ಹಿಡಿತವನ್ನು ಈ ಬಾರಿಯ ಚುನಾವಣೆಯಲ್ಲಿ ಕಳೆದುಕೊಳ್ಳಬೇಕಾಯಿತು. ಕಾರಣಗಳು ಬಹುಶಃ ಪಕ್ಷದ ನಾಯಕರ ವಲಸೆ ಇರಬಹುದು.

ಅಚ್ಚರಿಯ ವಿಚಾರ ಎಂದರೆ ಕರಾವಳಿ ಕರ್ನಾಟಕ ಮೊದಲಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹಣಾಹಣಿಯ ಕಣವಾಗಿತ್ತು ಈ ಬಾರಿ ಜೆಡಿಎಸ್ ತನ್ನ ಪ್ರವೇಶವನ್ನು ಮೂರು ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಕಟಿಸಿದೆ.ಹಳಿಯಾಳದಲ್ಲಿ ಸುನಿಲ್ ಹೆಗಡೆ ಮತ್ತು ಕುಮಟಾದಲ್ಲಿ ದಿನಕರ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಘಟಾನುಘಟಿಗಳನ್ನೇ ಹೊಂದಿದೆ. ಹೀಗಾಗಿ ಸಹಜವಾಗಿ ಕಾಂಗ್ರೆಸ್‌ನ ಭದ್ರಕೋಟೆ ಎಂದು ಹೇಳಬಹುದಾಗಿತ್ತು. ಈ ಬಾರಿ ಜೇವರ್ಗಿಯಲ್ಲಿ ಧರ್ಮಸಿಂಗ್ ಅವರ ಸೋಲು ಎಲ್ಲರಿಗೂ ಆಘಾತಕಾರಿ ಸಂಗತಿ ಎಂದೇ ಹೇಳಬಹುದು. ಒಂಭತ್ತನೇ ಬಾರಿ ವಿಧಾನ ಸಭೆಯನ್ನು ಪ್ರವೇಶಿಸಿ ದಾಖಲೆ ಮಾಡಬೇಕು ಎಂದಿದ್ದ ಧರ್ಮಸಿಂಗ್ ಕನಸನ್ನು ಮತದಾರ ಪ್ರಭು ಅದ್ಯಾವ ಕಾರಣಕ್ಕೊ ನುಚ್ಚು ನೂರು ಮಾಡಿದ್ದಾನೆ. ಹೈದರಾಬಾದ್ ಕರ್ನಾಟಕ ಮಾತ್ರ ಕಾಂಗ್ರೆಸ್ ಕೈ ಹಿಡಿದಿದೆ. ಜೆಡಿಎಸ್ ಮತ್ತು ಪಕ್ಷೇತರರನ್ನು ಗೂಡಿಸಿ ಹಾಕಿರುವ ಕಾಂಗ್ರೆಸ್ ಈ ಬಾಗದಲ್ಲಿ ಶೇ 5ರಷ್ಟು ಹೆಚ್ಚು ಸ್ಥಾನಗಳನ್ನು ಕಳೆದ ವಿಧಾನ ಸಭೆಗೆ ಹೋಲಿಸಿದಲ್ಲಿ ಗಳಿಸಿದ್ದರೆ, ಬಿಜೆಪಿಯ ಸ್ಥಾನ ಗಳಿಕೆ ಏಳರಿಂದ ಹನ್ನೊಂದಕ್ಕೆ ಎರಿದೆ.

ಕಳೆದ ಬಾರಿಯು ಭಾರತೀಯ ಜನತಾ ಪಕ್ಷವನ್ನು ಆಶೀರ್ವದಿಸಿದ್ದ ಮುಂಬೈ ಕರ್ನಾಟಕದವರು ಈ ಬಾರಿಯೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಶೀರ್ವದಿಸಿದ್ದಾರೆ. ಮೂರನೆ ಹಂತದ ಚುನಾವಣೆಯಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಬಿಜೆಪಿ ಆರು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ. ಧಾರವಾಡ ಮತ್ತು ಹುಬ್ಬಳ್ಳಿಗಳಲ್ಲಿ ಐದು ವಿಧಾನಸಭಾ ಕ್ಷೇತ್ರಗಳು ಕೇಸರಿ ಪಕ್ಷದ ಹಿಡಿತಕ್ಕೆ ಸಿಲುಕಿವೆ. ಗದಗ ಜಿಲ್ಲೆಯ ಮತದಾರರು ಪೂರ್ಣ ಶೇ ನೂರಕ್ಕೆ ನೂರರಷ್ಟು ಬಿಜೆಪಿಗೆ ಒಲಿದಿದ್ದು. ಗದಗ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ(?) ಎಚ್. ಕೆ. ಪಾಟೀಲ್ ಪರಾಭವಗೊಂಡಿದ್ದಾರೆ.

ಜೆಡಿಎಸ್‌ನ ಭದ್ರಕೋಟೆ ಮೈಸೂರು ಸೇರಿದಂತೆ ಇಡೀ ದಕ್ಷಿಣ ಕರ್ನಾಟಕವೇ ಈ ಬಾರಿ ಕೈಬಿಟ್ಟು ಹೋಗಿದೆ. ಇದರ ಪೂರ್ಣ ಪ್ರಮಾಣ ಕಾಂಗ್ರೆಸ್ಸಿಗೆ, ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ ಸಾಧನೆ, ಈ ಬಾರಿಯ ಚುನಾವಣೆಯಲ್ಲಿ ಶೇ 14ರಷ್ಟು ಹೆಚ್ಚು ಸ್ಥಾನಗಳನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ. ಭಾರತೀಯ ಜನತಾ ಪಕ್ಷ ಮಾತ್ರ ಏಳು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ. ಜೆಡಿಎಸ್ ಒಟ್ಟಾರೆ ಕಳೆದ ಚುನಾವಣೆಗೆ ಹೋಲಿಸಿದಲ್ಲಿ 13 ಸ್ಥಾನಗಳನ್ನು ಕಳೆದುಕೊಂಡಿದೆ.

Share this Story:

Follow Webdunia kannada