Webdunia - Bharat's app for daily news and videos

Install App

ಇದು ನನ್ನ 'ಪ್ರೊಫೆಶನಲ್' ಪ್ರೀತಿ...

Webdunia
ದೀಪಕ್ ಮಧ್ಯಸ್ಥ, ಅರೆಹೊಳೆ
WD
ಹಿಂದೆ ಲವ್ ಮಾಡಿಲ್ಲ, ಮುಂದೆನೂ ಮಾಡಲ್ಲವೆಂದು ಭೀಷ್ಮ ಪ್ರತಿಜ್ಞೆ ಮಾಡಿ ಕಾಲೇಜು ಮೆಟ್ಟಿಲು ಹತ್ತಿದ್ದವ ನಾನು. ಕಳೆದ ವರ್ಷ ಇದೇ ಸಮಯದಲ್ಲಿ ನಾನು ಫೈನಲ್ ಇಯರ್ ಡಿಗ್ರಿಯಲ್ಲಿದ್ದೆ, ಕೆಲವು ಗಂಡು ಹುಡುಗರು, ಹೆಣ್ಣು ಹುಡುಗಿಯರು ಅದೇನೋ ಲವ್ ಅಂತ ಮಾಡುತ್ತಿದ್ದರು. ಅವರ ಲವ್ ಅಂದರೆ ಒಂದೆರಡು ದಿನ ಹುಡುಗಿಯೊಂದಿಗೆ ಸುತ್ತಾಡಿ, ಜಾಲಾಡಿ, ಅದರೊಂದಿಗೆ ಮತ್ತೊಬ್ಬರಿಗೆ ಎಸ್ಎಂಎಸ್ ಕಳುಹಿಸುತ್ತಾ ಕಾಲ ಕಳೆಯುತ್ತಿದ್ದರು.

ಒಟ್ಟಿನಲ್ಲಿ ಆಗಾಗ್ಗೆ ಚೇಂಜ್ ಮಾಡಿಕೊಳ್ಳುತ್ತಾ ಆಡುತ್ತಿದ್ದ ಲವ್ ಆಟವಾಗಿತ್ತದು. ಅವಳೇನಾದರೂ ಫ್ರೀ ಇದ್ದರೆ ಅವಳೊಂದಿಗೆ ಸುತ್ತಾಡುವುದು, ಆವಾಗಲೂ ಸಹ ಸೇಫ್ಟಿಗಾಗಿ ಇನ್ನೊಬ್ಬಳಿಗೆ ಗಾಳ ಹಾಕುವುದು ಮುಂದುವರಿದೇ ಇತ್ತು. ಇದು ಅವರ ರೂಟೀನ್ ಜಾಬ್.

ಇವರು ವ್ಯಾಲೆಂಟೈನ್ಸ್ ಡೇ ಅನ್ನು ಬಹಳ ಅದ್ದೂರಿಯಿಂದ ಆಚರಿಸುವ ಕೆಟಗರಿ. ವರ್ಷದ ಪ್ರತಿ ದಿನವೂ ಪ್ರೇಮಿಗಳ ದಿನ ಆದರೆ ಒಳ್ಳೆಯದಿತ್ತು ಎಂಬುದು ಇವರ ಯೋಚನೆ. ಇದು ಸ್ವಘೋಷಿತ ಪ್ರೊಫೆಶನಲ್ ಲವರ್‌ಗಳ ಪ್ರೊಫೈಲ್. ಆದರೀಗ ಹುಡುಗಿಯರಲ್ಲಿಯೂ ಇಂಥದ್ದೊಂದು ಬ್ರಾಂಚ್ ಇದೆ ಎನ್ನುವುದು ಸಂತಸಕರ. ಏಕೆಂದರೆ ಅವರಿಗೆ ಕೊಟ್ಟ ಸ್ವಾತಂತ್ರ್ಯವನ್ನು ಅವರು ಪೂರ್ಣವಾಗಿ ಉಪಯೋಗಿಸುತ್ತಿರುವುದು ಸಂತಸವಲ್ಲದೆ, ಮತ್ತೇನು...? ಒಟ್ಟಿನಲ್ಲಿ ಅವರು ಇವರಿಗೆ ಇವರು ಅವರಿಗೆ ಇ-ಗ್ರೀಂಟಿಂಗ್ಸ್ ಸರಬರಾಜು ಮಾಡುತ್ತಲೇ ಇರುತ್ತಿದ್ದರು.

ಇನ್ನೂ ಕೆಲವು ಕೆಟಗರಿಗಳಿವೆ ಅವುಗಳು ಇಲ್ಲಿ ಮುಖ್ಯವಲ್ಲ ಬಿಡಿ. ಒಂದರಲ್ಲಿ, ಓದುವುದು ಬಿಟ್ಟು ಬೇರೇನೂ ತಿಳಿಯದವರು, ಇನ್ನೊಂದರಲ್ಲಿ, ಓದೂ ಇಲ್ಲ, ಲವ್ವೂ ಇಲ್ಲದ ಕೈಯಲ್ಲಿ ಬಾಲ್, ಬ್ಯಾಟ್ ಹಿಡಿದು 24 ತಾಸು ಸ್ಪೋರ್ಟ್ಸ್‌ಮೆನ್, ಯಾವಾಗ ನೋಡಿದ್ರೂ ಆನ್‌ಲೈನ್ ಗೇಮ್‌ನಲ್ಲೇ ನಿರತವಾಗಿರುವವರು ಇತ್ಯಾದಿ ಇತ್ಯಾದಿ.

ಇದರಲ್ಲಿ ನನ್ನದು ಯಾವ ಬ್ರಾಂಚ್‌? ನನ್ನದು ಪ್ರೊಫೆಷನಲ್ ಕೆಟಗರಿ, ಗ್ರಂಥಾಲಯದ ಹುಳು, ಕಂಪ್ಯೂಟರ್ ವೈರಸ್ ಅಂತಲೇ ಪ್ರಖ್ಯಾತಿ ಹೊಂದಿದ್ದೆ. ಕೆಲವೊಮ್ಮೆ ಅದು ಕುಖ್ಯಾತಿಯೂ ಆಗುತಿತ್ತು. ನನ್ನ ಗೆಳೆಯರು ಮತ್ತು ಗೆಳತಿಯರನ್ನು ನಾನು ಕೂಡ ಪ್ರೀತಿಸುತ್ತಿದ್ದೆ.ಅವರೊಂದಿಗೆ ಸುತ್ತಾಡುವುದು ನನ್ನಿಷ್ಟದ ಸಂಗತಿಯೂ ಹೌದು. ಅವರು ಸುತ್ತಾಡಿಸಿದಲ್ಲಿಗೆ ನಾನೂ ಹೋಗುತ್ತಾ, ಹೊಸ ತಾಣಗಳು, ಹೊಸ ಟೂಲ್‌ಗಳು, ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ನನ್ನ ಜ್ಞಾನ ಸಂಪಾದನೆಯೂ ಆಗುತ್ತಿತ್ತು.

ನಾನು ಈ ವ್ಯಾಲೆಂಟೈನ್ಸ್ ಡೇಗೆ ಸಂಬಂಧಪಟ್ಟ ಪ್ರೀತಿಯನ್ನು ಎಂದಿಗೂ ಯಾರೊಂದಿಗೂ ಮಾಡಿಲ್ಲ ಎಂದುಕೊಂಡಿದ್ದೆ. ಆದರೆ ಈಗ ತಿಳಿಯುತ್ತಿದೆ. ದ್ಯಾಟ್ ಟೈಮ್ ಐ ವಾಸ್ ಇನ್ ಲವ್ ಅಂಥ. ಲವ್ ಗಿವ್ ಅಂಥ ಕೆಲವು ಗೆಳತಿಯರಲ್ಲಿ ಹುಚ್ಚಾಟ ಮಾಡುತ್ತಿದ್ದೆ. ಅವರಿಗೂ ಅದು ತಿಳಿದಿದ್ದುದರಿಂದ ಅದು ಹುಚ್ಚಾಟಕ್ಕೆ ಮಾತ್ರ ಸೀಮಿತವಾಗಿತ್ತು.

ಒಮ್ಮೆ ಅವರೆಲ್ಲರಿಗಿಂತಲೂ ಹೆಚ್ಚು ಆಕರ್ಷಕವಾದ, ಬುದ್ಧಿವಂತೆಯಾದ, ಬ್ಲಾಕ್ ಬ್ಯೂಟಿಯೊಬ್ಬಳು ನನ್ನ ಅಪ್ಪನಿಂದ ಪರಿಚಿತವಾದಾಗ, ನಕಲಿ ಸಾಫ್ಟ್‌ವೇರ್ ಬಳಸುತ್ತಿದ್ದವನಿಗೆ ಅಸಲಿ ಸಾಫ್ಟ್‌ವೇರ್ ಸಿಕ್ಕಿದಂತಾಯಿತು. ಅವಳನ್ನು ಬಿಟ್ಟಿರಲಾಗುತ್ತಿರಲಿಲ್ಲ, ಸಮಯ ಸಿಕ್ಕಾಗಲೆಲ್ಲಾ ಅವಳನ್ನು ಮಾತನಾಡಿಸುವುದೇ ನನ್ನ ಕೆಲಸವಾಗಿತ್ತು. ಅವಳನ್ನು ನಾನು ಮಾತಾಡಿಸುವ ಸಮಯದಲ್ಲಿ ಬೇರೆ ಯಾರಾದರೂ ಅಡ್ಡ ಬಂದರೆ ಕೆಟ್ಟ ಕೋಪ ಬರುತ್ತಿತ್ತು. ಇದೂ ಎಕ್ಸ್‌ಟರ್ನಲ್ ಅಫೇರ್ ಆಗಿದ್ದರಿಂದ ಕಾಲೇಜಿಗೂ ಇದಕ್ಕೂ ಸಂಬಂಧವಿರಲಿಲ್ಲ. ನನ್ನ ಪರೀಕ್ಷೆಗಳೆಲ್ಲ ಮುಗಿದ ಮೇಲೆ ಸಮಯ ಸಿಕ್ಕಾಗಲೆಲ್ಲ ಅವಳ ಮುಂದೆ ಕೂತು ಮಾತನಾಡುತ್ತಿದ್ದೆ, ಹರಟುತ್ತಿದ್ದೆ, ಅವಳನ್ನು ನನ್ನಿಷ್ಟದ ಪ್ರಕಾರ ಬಳಸುತ್ತಿದ್ದೆ, ಒಟ್ಟಿನಲ್ಲಿ ನಾನು ಮತ್ತು ಅವಳು ಲವ್‌ನಲ್ಲಿ ಬಿದ್ದಿದ್ದೆವು!

ಹೀಗೆ ಕಾಲ ಕಳೆಯುತ್ತಿರುವಾಗ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ನೌಕರಿಗೆ ಆಯ್ಕೆಯಾದ ವಿಷಯ ತಿಳಿಯಿತು, ಇಂಟರ್‌ವ್ಯೂಗೆ ಬರುವಂತೆ ಕೂಡ ಇ-ಮೇಲ್ ಸಿಕ್ಕಿತು. ಅದನ್ನೂ ನನ್ನ ಕೈಗಿತ್ತವಳು ಇವಳೇ. ಈ ಹಿಂದೆ ಒಂದು ಬಿಪಿಒ ಕಂಪೆನಿಗೂ ಆಯ್ಕೆಯಾಗಿದ್ದೆ. ಆದ್ದರಿಂದ ನನ್ನಲ್ಲಿ ಎರಡು ಆಯ್ಕೆಗಳಿದ್ದವು. ಆದರೂ ಮನಸ್ಸಿನಲ್ಲೊಂದು ಕಡೆ, ಇವಳನ್ನು ಬಿಟ್ಟಿರಬೇಕಲ್ಲಾ ಎಂಬ ತಳಮಳ.

ಏನೇ ಆಗಲಿ, ಮುಂದೆ ಸಾಗುವೆ ಎಂದು ಇಂಟರ್‌ವ್ಯೂಗೆ ಬಂದೆ. ಆಗ ಆಯಿತು ಕಹಾನಿ ಮೇ ಟ್ವಿಸ್ಟ್... ಇಂಟರ್ವ್ಯೂ ತಾಣಕ್ಕೆ ಬಂದಾಗ ಅಲ್ಲೊಬ್ಬಳು ನನ್ನವಳಿಗಿಂತಲೂ ಜಾಣೆಯಾಗಿದ್ದಳು. ಸ್ಲಿಮ್, ಅಟ್ರ್ಯಾಕ್ಟಿವ್, ಸ್ಮಾರ್ಟ್, ಬ್ಲ್ಯಾಕ್ ಬ್ಯೂಟಿ, ಮಾತ್ರವಲ್ಲ ಪ್ರೊಫೆಶನಲ್ ಬೇರೆ!. ಇವಳಿಂದ ಆಕರ್ಷಿತನಾದೆ. ಇದರಿಂದಾಗಿ ಎರಡು ಆಯ್ಕೆಗಳಲ್ಲಿ ಇದೇ ಬೆಟರ್ ಅನ್ನಿಸಿತು. ಈ ಕಂಪನಿಗೆ ಸೇರುವುದು ಪಕ್ಕಾ ಆಯಿತು. ಯಶಸ್ವಿಯಾಗಿ ಇಂಟರ್‌ವ್ಯೂ ಮುಗಿಸಿ ಮನೆಗೆ ವಾಪಸಾದೆ. ಅಲ್ಲಿ ಅವಳು ನನಗಾಗಿ ಕಾಯುತ್ತಿದ್ದಳು. ಒಂದೆರಡು ದಿನಗಳಲ್ಲಿ ಆ ಕಂಪನಿಯಿಂದ ಮೆಸೇಜ್ ಸಿಕ್ತು ನೀವು ಆಯ್ಕೆಯಾಗಿದ್ದೀರಿ ಅಂತ. ಆಗಲೂ ಇನ್‌ಬಾಕ್ಸ್‌ನಲ್ಲಿದ್ದ ಈ ಸಂದೇಶವನ್ನು ನನ್ನ ಕೈಗಿತ್ತವಳು ಇವಳೇ. ಆಗ ನನಗಾದ ವಿರಹ ವೇದನೆ ಅಷ್ಟಿಷ್ಟಲ್ಲ. ಹೇಗೋ ಬಿಟ್ಟು ಬಂದೆ.

ಹೊಸ ತಾಣ. ಕೆಲವೇ ದಿನಗಳಲ್ಲಿ ಇಲ್ಲಿನವಳೇ ನನಗೆ ಆಪ್ತಳಾದಳು. ನಂತರ ಸ್ನೇಹ, ಪ್ರೀತಿ ಸಿಕ್ಕಾಪಟ್ಟೆ ಫಾಸ್ಟ್ ಆಗಿಯೇ ಆಗಿ ಹೋಯ್ತು. ಹೀಗೆ ದಿನ ಕಳೆಯುತ್ತಿರುವಾಗ ನಾನೊಮ್ಮೆ ರಜೆ ತೆಗೆದುಕೊಂಡು ಊರಿಗೆ ಹೋದೆ. ನಾನೆಣಿಸಿದ್ದೆ ಅವಳು ನನಗಾಗಿ ಕಾಯುತ್ತಿರಬಹುದೆಂದು, ಆದರೆ ಹಾಗಾಗಲಿಲ್ಲ. ಅವಳು ಬೇರೊಬ್ಬರಿಗೆ ಹೊಂದಿಕೊಂಡಿದ್ದಳು. ನಾನು ಅವಳನ್ನು ಮಾತನಾಡಿಸಿದೆ. ಆದರೆ ಅಷ್ಟು ಸಲಿಗೆ ಇರಲಿಲ್ಲ. ಆಗ ನಾನು ಸ್ವಘೋಷಿತ ಪ್ರೊಫೆಶನಲ್ ಲವರ್ ಹಾಗೆಯೇ ಮನಸ್ಸಿನಲ್ಲಿಯೇ "ಚಿಂತಿಸಬೇಡ ಮ್ಯಾನ್. ನಿನಗೆ ನಿನ್ನ ನೌಕರಿಯ ತಾಣದಲ್ಲಿ ಮತ್ತೊಂದು ಆಯ್ಕೆ ಇದೆಯಲ್ಲ" ಅಂತ!

ಈಗ ನನ್ನ ಲವ್‌ಗೆ ವೈರಸ್ ದಾಳಿ ಮಾಡದಂತೆ ಪಕ್ಕಾ ಆಂಟಿವೈರಸ್ ಇಲ್ಲಿದೆ. ನನ್ನ ಸೆಕೆಂಡ್ ಡೀಪೆಸ್ಟ್ ಲವ್ ಮುಂದುವರಿಯುತ್ತಿದೆ... ಅಡ್ಡಿ ಪಡಿಸಬೇಡಿ...

ಇತೀ,
ಮುಂದಿನ ಪ್ರೇಯಸಿ Windows-7 ಗಾಗಿ ಕಾಯುತ್ತಿರುವ...
ಪ್ರೊಫೆಶನಲ್ ಎಕ್ಸ್‌ಪಿ ಕಂಪ್ಯೂಟರ್ ಪ್ರೇಮಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಬೇಸಿಗೆಯಲ್ಲಿ ಈ ಐದು ಹಣ್ಣುಗಳನ್ನು ಸೇವಿಸಿ: ಅಚ್ಚರಿ ಬದಲಾವಣೆ ಕಾಣುತ್ತೀರಿ

ಬೆಳ್ಳುಳ್ಳಿಯನ್ನು ತಿನ್ನುವ ಸರಿಯಾದ ಕ್ರಮ ಹೀಗಿರಲಿ

ಸಿಹಿ ಕುಂಬಳಕಾಯಿ ಬಳಸಿ ಫೇಸ್ ಪ್ಯಾಕ್ ತಯಾರಿಸಿ

ತೂಕ ಕಡಿಮೆಯಾಗಬೇಕಾದರೆ ಈ ಯೋಗ ಮಾಡಿ

ಹಲ್ಲಿನ ವಸಡಿನಲ್ಲಿ ರಕ್ತ ಬರಲು ಕಾರಣಗಳು

Show comments