ನಟಿ ಅಮೂಲ್ಯ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರುತ್ತಿದ್ದಾರೆ...

ವೆಬ್‌ದುನಿಯಾ ವಿಶೇಷ ಸಂದರ್ಶನ

(ನ್ಯೂಸ್ ರೂಂ ಬೆಂಗಳೂರು)

NRB
ಸದ್ಯ ಗಾಂಧಿ ನಗರದ ಎಲ್ಲೆಡೆ ಮನೆಮಾತಾಗಿರುವ ಹುಡುಗಿ ಅಮೂಲ್ಯ. ಇನ್ನೂ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವಾಕೆ. ಈಗಾಗಲೇ ಯಶಸ್ವೀ ನಾಯಕ ನಟ, "ಮುಂಗಾರು ಮಳೆ"ಯ ಹೀರೋ ಗಣೇಶ್‌ಗೆ ನಾಯಕಿಯಾಗಿ ಕರ್ನಾಟಕದಲ್ಲಿ ಮನೆಮಾತಾಗಿದ್ದಾಳೆ. ತನ್ನ ನೈಜ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಎಸ್. ನಾರಾಯಣ್ ನಿರ್ದೇಶನದ ಚೆಲುವಿನ ಚಿತ್ತಾರಕ್ಕೆ ಈಕೆ ನಾಯಕಿ. ಚಿತ್ರ ಬಿಡುಗಡೆಯಾಗಿ 50 ದಿನ ಕಳೆದಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ. ಅರೆ, ಇಷ್ಟು ಸಣ್ಣ ವಯಸ್ಸಿಗೇ ಅದೇನು ಮೋಡಿ ಮಾಡಿದ್ದಾಳಲ್ಲಾ ಎಂದು ಹುಬ್ಬು ಹಾರಿಸಬೇಕಿಲ್ಲ.

ಈಕೆ ಬಾಲನಟಿಯಾಗಿ ತನ್ನ 7ನೇ ವರ್ಷದಲ್ಲಿ ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪ್ರವೇಶಿಸಿದವಳು. ಡಾ.ಗಿರಿಜಮ್ಮ ಅವರ ಧಾರಾವಾಹಿ "ಸುಪ್ತಮನಸ್ಸಿನ ಸಪ್ತಸ್ವರಗಳು", ಸುನೀಲ್ ಕುಮಾರ್ ದೇಸಾಯಿಯವರ ಚಿತ್ರ "ಪರ್ವ"ದಲ್ಲಿ ಸಣ್ಣದೊಂದು ಪಾತ್ರ, ನಾಗಾಭರಣ ಅವರ "ಗೆಳತಿ" ಧಾರಾವಾಹಿ, ವೈಶಾಲಿ ಕಾಸರವಳ್ಳಿಯವರ "ಮೂಕರಾಗ", ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗೃಹಭಂಗ", ಯೋಗರಾಜ ಭಟ್ಟರ "ಎಲ್ಲೋ ಜೋಗಪ್ಪ ನಿನ್ನ ಅರಮನೆ", ಹೀಗೆ ವಿವಿಧ ಧಾರಾವಾಹಿಗಳಲ್ಲಿ ತನ್ನ ನೈಜ ಅಭಿನಯದಿಂದಾಗಿ ಎಸ್.ನಾರಾಯಣ್ ಗಮನ ಸೆಳೆದಳು. ಪರಿಣಾಮ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗುವ ಅವಕಾಶ.

ಇಂದು ನಟಿ ಅಮೂಲ್ಯ ಅತ್ಯಂತ ಬ್ಯುಸಿ. ಬೆಳಗ್ಗೆ ಎಂಟು ಗಂಟೆಯಿಂದ ಶಾಲೆ. ಅದಾದ ಬಳಿಕ ಶೂಟಿಂಗ್, ಜತೆಗೆ ಅಭಿಮಾನಿಗಳ ದೂರವಾಣಿ ಹಾರೈಕೆ. ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮದವರ ಸಂದರ್ಶನ ಹೀಗೆ. ಶಾಲೆಗೆ ಹೊರಡುವ ತರಾತುರಿಯಲ್ಲಿ ವೆಬ್ ದುನಿಯಾದೊಂದಿಗೆ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ:

ಚಿಕ್ಕ ವಯಸ್ಸಿನಲ್ಲೇ ನಟಿಯಾಗಿ ನಾಯಕಿಯಾಗಿರುವ ಬಗ್ಗೆ ಏನನಿಸುತ್ತದೆ ?

ತುಂಬಾನೇ ಖುಷಿಯಾಗುತ್ತಿದೆ. ನಟಿಯಾಗಿ ನಟಿಸಿದ ಮೊದಲ ಚಿತ್ರವೇ ಯಶಸ್ವಿಯಾಗಿದೆ. ಇದಕ್ಕೆ ಪ್ರೋತ್ಸಾಹಿಸಿದ ನಿರ್ದೇಶಕ ನಾರಾಯಣ್ ಹಾಗೂ ನನ್ನನ್ನು ಪ್ರೋತ್ಸಾಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಈಗ ಹೆಸರು ಗಳಿಸಿದ್ದೀರಿ. ಹಿಂದಿಗೂ... ಇಂದಿಗೂ ಏನು ವ್ಯತ್ಯಾಸ?

ಬದಲಾವಣೆ ಏನೂ ಆಗಿಲ್ಲ. ತರಗತಿಯಲ್ಲೂ ನಾನು ಸೈಲೆಂಟ್. ನಾನು ಇರುವುದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಚಿತ್ರದಲ್ಲಿ ನಟಿಸಿದ ಬಳಿಕ ಎಲ್ಲರಿಗೂ ನಾನು ಪರಿಚಯವಾಗಿದ್ದೇನೆ. ಎಲ್ಲರೂ ನನ್ನನ್ನು ಗುರುತಿಸುತ್ತಾರೆ.

ಆಟೋಗ್ರಾಫ್ ಕೊಡೋಕೆ ಶುರು ಮಾಡಿದ್ದೀರಾ ?

ಖಂಡಿತಾ ಇಲ್ಲ, ನಾನು ಓದುತ್ತಿರೋ ಶಾಲೆಯಲ್ಲೂ ಕೆಲವರು ಆಟೋಗ್ರಾಫ್ ಕೊಡಿ ಅಂತಾರೆ. ನಾನು ಯಾವುದೇ ಕಾರಣಕ್ಕೂ ಊಹೂಂ ಅಂತೀನಿ. ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡ್ತೀನಿ.

ಸ್ವಾತಂತ್ರ್ಯೋತ್ಸವವನ್ನು ಯಾವರೀತಿ ಆಚರಿಸ್ತೀರಿ ?

ಅಂದು ಬೆಳಗ್ಗೆ ದೇವರಿಗೆ ಪೂಜೆ ಮಾಡ್ತೀನಿ. ಅನಂತರ ಎಲ್ಲ ನನ್ನ ಸಹಪಾಠಿಗಳಂತೆ ಶಾಲೆಯಲ್ಲಿ ನಡೆಯುವ ಧ್ವಜಾರೋಹಣದಲ್ಲಿ ಭಾಗವಹಿಸ್ತೀನಿ.

ನಿಮ್ಮ ಬದುಕಿನ ಗುರಿ ಏನು ?

ಹೆಸರಾಂತ ನಟಿಯಾಗಬೇಕು. ಉತ್ತಮ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಬೇಕು.

ಅಭಿಮಾನಿಗಳಿಗೆ ನಿಮ್ಮ ಸಂದೇಶ ಏನು ?

ಎಲ್ಲರಿಗೂ ಹ್ಯಾಪಿ ಇಂಡಿಪೆಂಡೆನ್ಸ್ ಡೇ.