Webdunia - Bharat's app for daily news and videos

Install App

ಕರ್ನಾಟಕದಲ್ಲಿದೆ ಚಿಕ್ಕ ತಿರುಮಲ ನಿಮಗೆ ಗೊತ್ತೇ...!

ಗುರುಮೂರ್ತಿ
ಶುಕ್ರವಾರ, 2 ಫೆಬ್ರವರಿ 2018 (17:16 IST)
ಪಶ್ಚಿಮಘಟ್ಟಗಳಿಗೆ ಹೊಂದಿಕೊಂಡಿರುವ ಕರಾವಳಿ ಪ್ರದೇಶವು ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕತೆಗಳ ನೆಲಗಟ್ಟುಗಳ ಮೇಲೆ ನಿಂತಿದೆ. ಇಲ್ಲಿ ಎಲ್ಲವೂ ಇದೆ ಸುತ್ತಲೂ ಹಸಿರಿನಿಂದ ಕಂಗೊಳಿಸೋ ಮಲೆನಾಡು ಅದರಲ್ಲಿ ಕಾಣ ಸಿಗೋ ಜಲಪಾತಗಳು, ಪಶ್ಚಿಮಕ್ಕೆ ಹಾಸಿರೋ ಅರಬ್ಬೀ ಒಟ್ಟಾಗಿ ಪ್ರಕೃತಿಯ ಮಡಿಲಿನ ಸ್ವರ್ಗ ಅಂತಲೇ ಕರೆಯುವುದಾದರೆ ಅದು ಉತ್ತರ ಕನ್ನಡ ಜಿಲ್ಲೆ ಮಾತ್ರ.

 
ಉತ್ತರ ಕನ್ನಡ ಜಿಲ್ಲೆಯನ್ನು ಕರ್ನಾಟಕದ ಕಾಶ್ಮೀರ ಅಂತಾ ಕರೆಯುವುದರೊಂದಿಗೆ ಈ ಜಿಲ್ಲೆಯಲ್ಲಿರುವ ಗೋಕರ್ಣ ಕ್ಷೇತ್ರವನ್ನು ದಕ್ಷಿಣ ಕಾಶಿ ಅಂತಲು ಕರೆಯುತ್ತಾರೆ. ಅಲ್ಲದೇ ಇದೇ ಜಿಲ್ಲೆಯಲ್ಲಿನ ಮಂಜುಗುಣಿ ಕ್ಷೇತ್ರವನ್ನು ಚಿಕ್ಕ ತಿರುಪತಿ ಎಂತಲು ಕರೆಯುತ್ತಾರೆ. ಅದು ಹೇಗಿದೆ ಅದರ ವಿಶೇಷತೆಗಳೇನು ಎಂಬಿತ್ಯಾದಿ ಮಾಹಿತಿಗಳು ನಿಮಗಾಗಿ.

ಉತ್ತರ ಕನ್ನಡ ಜಿಲ್ಲೆ ಹಲವಾರು ಪುಣ್ಯಕ್ಷೇತ್ರಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದ್ದು, ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಇಲ್ಲಿ ಪ್ರಾಚೀನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರಗಳಿದ್ದು, ಪುರಾಣ ಪ್ರಸಿದ್ಧ ತಾಣಗಳನ್ನು ಸಹ ನಾವು ಈ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಈ ಕ್ಷೇತ್ರವು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಂಜಗುಣಿ ಎಂಬ ಗ್ರಾಮದಲ್ಲಿದ್ದು ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿದೆ.
ಚಿಕ್ಕ ತಿರುಪತಿ ಎಂಬ ಹೆಸರಿನಿಂದಲೇ ಪ್ರಖ್ಯಾತಿ ಹೊಂದಿರುವ ಈ ಮಂಜಗುಣಿ ಕ್ಷೇತ್ರ ಪುರಾತನ ಇತಿಹಾಸವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ವೆಂಕಟೇಶ್ವರ ಸ್ವಾಮಿಯು ನೆಲೆ ನಿಂತಿದ್ದು ಭಕ್ತಾದಿಗಳ ಇಷ್ಟಾರ್ಥಗಳನ್ನು ನೆನವೇರಿಸೋ ದೈವವಾಗಿದ್ದಾನೆ. ಕೆಲವು ಮೂಲಗಳ ಪ್ರಕಾರ ಇಲ್ಲಿರುವ ವೆಂಕಟೇಶ್ವರ ಸ್ವಾಮಿ ಮತ್ತು ತಿರುಪತಿಯ ವೆಂಕಟೇಶ್ವರ ಸ್ವಾಮಿಯು ಎರಡು ಒಂದೇ ಎಂದು ಹೇಳಲಾಗುತ್ತಿದೆ. ತಿರುಮಲ ಯೋಗಿಗಳು ತಪೋನಿರತರಾದ ಕ್ಷೇತ್ರ ಇದಾಗಿದ್ದು, ತಿರುಮಲ ಯೋಗಿಗಳಿಗೆ ವೆಂಕಟರಮಣ ಸ್ವಾಮಿಯ ನೀಡಿದ ಆದೇಶದಂತೆ ಈ ದೇವಸ್ಥಾವನ್ನು ಸ್ಥಾಪಿಸಲಾಯಿತು ಎಂಬುದು ಇಲ್ಲಿನ ಪ್ರತೀತಿ.
 
ಹಿನ್ನೆಲೆ 
ಈ ಮಂಜುಗುಣಿಯ ಹತ್ತಿರದಲ್ಲಿ ಕಂಕತೀರ್ಥ ಎನ್ನುವ ಪ್ರದೇಶವಿದೆ. ಈ ಪ್ರದೇಶಕ್ಕೆ ವೆಂಕಟರಮಣ ಸ್ವಾಮಿಯು ಮೃಗೀಯ ವಿಹಾರಕ್ಕೆ ಬಂದು ತನ್ನ ಪರಿವಾರ ದೇವರೊಡನೆ ವಿಶ್ರಮಿಸಿದನು ಎಂದು ಹೇಳಲಾಗುತ್ತದೆ. ಇದಕ್ಕೆ ಆ ಪ್ರದೇಶದಲ್ಲಿ ಕೆಲವು ಕುರುಹುಗಳಿದ್ದು ಅದನ್ನು ನೀವು ಕಾಣಬಹುದಾಗಿದೆ ಅಷ್ಟೇ ಅಲ್ಲ, ಮಹಾನ್ ಯೋಗಿಗಳಾದ ತಿರುಮಲ ಯೋಗಿಗಳು ಈ ಸ್ಥಳದಲ್ಲಿ ವೆಂಕಟರಮಣ ಸ್ವಾಮಿಯ ಕುರಿತು ಧ್ಯಾನಿಸುತ್ತಿದ್ದರಂತೆ ಅದೇ ಸಮಯದಲ್ಲಿ ವೆಂಕಟರಮಣ ಸ್ವಾಮಿಯು ನಾನು ಈ ಸ್ಥಳದಲ್ಲಿ ಪರಿವಾರ ದೇವತೆಗಳೊಂದಿಗೆ ನೆಲೆನಿಂತಿರುವುದಾಗಿಯೂ ಉಳಿದ ವಿಗ್ರಹವನ್ನು ಹೊರತುಪಡಿಸಿ ತನ್ನ ವಿಗ್ರಹವನ್ನು ಎತ್ತಿಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಸ್ಥಾಪಿಸು ಎಂಬುದಾಗಿ ಆಜ್ಞೆವಿತ್ತರಂತೆ. ಅದರಂತೆ ಮಹಾಯೋಗಿ ತಿರುಮಲರು ವೆಂಕಟರಮಣ ಸ್ವಾಮಿಯ ವಿಗ್ರಹವನ್ನು ಈ ಸ್ಥಳದಲ್ಲಿ ಸ್ಥಾಪಿಸಿದರು ಎನ್ನುವುದು ಇಲ್ಲಿನ ಸ್ಥಳ ಪುರಾಣವಾಗಿದೆ. ಅಲ್ಲದೇ ಈ ಸ್ಥಳದಲ್ಲಿ ತಿರುಮಲ ಯೋಗಿಗಳು ತಪಸ್ಸು ಮಾಡಿದ ಸ್ಥಳ ಮತ್ತು ಮೂಲ ಮೂರ್ತಿಯಿದ್ದ ಸ್ಥಳವನ್ನು ಸಹ ನೀವು ಕಾಣಬಹುದಾಗಿದೆ.
 
ಕಂಕತೀರ್ಥ 
ಈ ಪ್ರದೇಶದಲ್ಲಿ ಈ ನದಿ ಹರಿಯುವುದಕ್ಕು ಒಂದು ಇತಿಹಾಸವಿದೆ. ಹಿಂದೆ ಕಂಕ ಎನ್ನುವ ತಪಸ್ವಿಗಳೊಬ್ಬರು ಈ ಸ್ಥಳದಲ್ಲಿ ತಪ್ಪಸ್ಸು ಮಾಡುತ್ತಿರುವಾಗ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲ ಎನ್ನುವುದನ್ನು ಮನಗಂಡು ಈ ನದಿಯನ್ನು ತಮ್ಮ ತಪ್ಪಸ್ಸು ಶಕ್ತಿಯ ಮೂಲಕ ಸ್ಥಾಪಿಸಿದರೆಂದು ಪ್ರತೀತಿ. ಅದಕ್ಕಾಗಿ ಈ ನದಿಯನ್ನು ಕಂಕತೀರ್ಥ ಇಲ್ಲವೇ ಕಂಕಹ್ರದ ಎಂದು ಕರೆಯುತ್ತಾರೆ. ಈ ಸ್ಥಳವು ತುಂಬಾ ಪ್ರಶಾಂತಮಯವಾಗಿದ್ದು ನೋಡಲು ರಮಣೀಯವಾಗಿದೆ.
 
ಶಿಲ್ಪಕಲೆ ಮತ್ತು ವಾಸ್ತುಶಿಲ್ಪ
ಈ ದೇವಸ್ಥಾನವು ಹಳೆಯ ಕಾಲದ ನಿರ್ಮಾಣದ ದೇವಸ್ಥಾನಗಳಲ್ಲಿ ಒಂದಾಗಿದ್ದು, ಈ ದೇವಸ್ಥಾನದ ಗೋಡೆಗಳ ಮೇಲಿನ ಮೂರ್ತಿ ಕೆತ್ತನೆಯನ್ನು ನಾವು ಕಾಣಬಹುದಾಗಿದೆ. ಅಲ್ಲದೇ ಇಲ್ಲಿನ ಪ್ರತಿ ಕೆತ್ತನೆಯ ಹಿಂದೆ ಯಾವುದೋ ಗೂಡಾರ್ಥ ಹೊಂದಿರುವಂತೆ ಅದನ್ನು ನೋಡಿದಾಗ ಭಾಸವಾಗುತ್ತದೆ ಮತ್ತು ಪ್ರತಿ ಕಂಬಗಳ ಮೇಲೆ ದೇವತೆಗಳ ರೂಪವನ್ನು ಕೆತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ.
 
ದೇವಾಲಯದ ಒಳಭಾಗವು ವಿಶಾಲವಾಗಿದ್ದು ಇದನ್ನು ನವರಂಗ ಎಂದು ಕರೆಯುತ್ತಾರೆ. ಇದರ ಸುತ್ತಲೂ ಇರುವ ಕಂಬಗಳು ಆಕರ್ಷಣೀಯವಾಗಿದ್ದು ದೇವಸ್ಥಾನದ ಒಳಭಾಗವಾದ ನವರಂಗವನ್ನು ಉಡುಪಿಯ ವಾದಿರಾಜ ಸ್ವಾಮಿಗಳು ಕಟ್ಟಿಸಿದರೆಂಬ ಪ್ರತೀತಿ ಇದೆ. ಅದಕ್ಕೆ ಪುಷ್ಠಿ ನೀಡುವಂತೆ ಕಂಬಗಳ ಮೇಲೆ ವಾದಿರಾಜರ ಆರಾಧ್ಯ ಧೈವವಾದ ಹಯಗ್ರೀವ ಸ್ವಾಮಿಯ ಕೆತ್ತನೆಯನ್ನು ಹಾಗೂ ಉಡುಪಿಯ ಶ್ರೀಕೃಷ್ಣನ ಕೆತ್ತನೆಯನ್ನು ನಾವು ಇಲ್ಲಿ ಕಾಣಬಹುದಾಗಿದೆ.
 
ಇದಲ್ಲದೇ ಈ ದೇವಾಲಯದ ಹೊರವಲಯದಲ್ಲಿ ರಾಮಾಯಣ, ಮಹಾಭಾರತದ ಚಿತ್ರಗಳನ್ನು ರಚಿಸಲಾಗಿದ್ದು, ದೇವಸ್ಥಾನದ ಪಕ್ಕದಲ್ಲೇ ಇರುವ ಪದ್ಮಾವತಿ ದೇವಿಯ ಮಂದಿರ ಇಲ್ಲಿನ ಇನ್ನೊಂದು ಆಕರ್ಷಣೆ ಆಗಿದೆ. ಇಲ್ಲಿನ ದೊಡ್ಡ ರಥವು ಮನಮೋಹಕವಾಗಿದ್ದು ಮಂಜಗುಣಿಯ ಪ್ರವೇಶ ದ್ವಾರದಲ್ಲಿ ದೊಡ್ಡದಾದ ಕೆರೆಯ ಪಕ್ಕ ಆದಿ ಮಂಜಗುಣಿಯ ನೆಲೆಯನ್ನು ನಾವು ಕಾಣಬಹುದಾಗಿದೆ. ಅಷ್ಟೇ ಅಲ್ಲ ಈ ದೇವಸ್ಥಾನದ ಸುತ್ತಲೂ ಚಿಕ್ಕ ಚಿಕ್ಕ ಕಲ್ಯಾಣಿಗಳಿದ್ದು ನೋಡಲು ತುಂಬಾ ಆಕರ್ಷಕವಾಗಿದೆ.
 
ಈ ದೇವಸ್ಥಾನವು ಇತರ ದೇವಸ್ಥಾನಗಳಿಗಿಂತ ತುಂಬಾ ಭಿನ್ನವಾಗಿದ್ದು, ಉಳಿದ ದೇವಸ್ಥಾನಗಳಲ್ಲಿ ಕಂಡುಬರುವಂತೆ ಇಲ್ಲಿ ಮಂತ್ರಘೋಷಗಳಿಂದ ದೇವರನ್ನು ಪೂಜೆ ಮಾಡಲಾಗುವುದಿಲ್ಲ ಬದಲಿಗೆ ಈ ವೆಂಕಟರಮಣ ಸ್ವಾಮಿಯನ್ನು ಮೌನವಾಗಿ ಪೂಜಿಸುವುದು ಇಲ್ಲಿನ ವಾಡಿಕೆ. ಇದು ತಿರುಮಲ ಸ್ವಾಮಿಗಳ ಅಣಿತಿಯಾಗಿದ್ದು, ಅವರ ಅಣತಿಯ ಮೇರೆಗೆ ಈ ಪದ್ಧತಿಯನ್ನು ರೂಢಿಸಿಕೊಂಡು ಬರಲಾಗಿದೆ.
ಇಲ್ಲಿ ಮತ್ತೊಂದು ವಿಶೇಷವಿದೆ ಅದೇನೆಂದರೆ ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಮೌನ ಪೂಜೆಯನ್ನು ಹರಿಕೆಯಾಗಿ ಕಟ್ಟಿಕೊಳ್ಳುತ್ತಾರೆ. ಇದರಿಂದ ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಭಕ್ತಿ ಭಾವ ಭಕ್ತವಲಯದಲ್ಲಿದೆ. ಈ ದೇವಸ್ಥಾನಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಬಂದು ಪೂಜೆ ಸಲ್ಲಿಸಿದರೆ ಅವರ ಎಲ್ಲಾ ಇಷ್ಟಾರ್ಥಗಳು ನೆರವೇರುವುದು ಎಂಬ ನಂಬಿಕೆ ಸಹ ಇಲ್ಲಿನ ಸ್ಥಳೀಯ ವಲಯದಲ್ಲಿದೆ.ಈ ಪ್ರದೇಶವು ಘಟ್ಟದ ಮೇಲಿನ ಪ್ರದೇಶದಲ್ಲಿದ್ದು ಚಳಿಗಾಲದಲ್ಲಿ ಇಲ್ಲಿ ದಟ್ಟ ಮಂಜು ಆವರಿಸುವ ಕಾರಣಕ್ಕೆ ಈ ಪ್ರದೇಶಕ್ಕೆ ಮಂಜುಗುಣಿ ಎಂಬ ಹೆಸರು ಒಂದಿರಬಹುದು ಎನ್ನುತ್ತಾರೆ ಸ್ಥಳೀಯರು.
 
ಇಲ್ಲಿಗೆ ಹೋಗಲು ದಾರಿ
 
ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲುಕಿನಲ್ಲಿದ್ದು ಇದು ಕಾರವಾದದಿಂದ 93 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ 431 ಕಿಮೀ. ದೂರದಲ್ಲಿದ್ದು ಈ ಸ್ಥಳಕ್ಕೆ ಬರಲು ನೀವು ಮೊದಲು ಶಿರಸಿಗೆ ಬರಬೇಕಾಗುತ್ತದೆ. ತದನಂತರ ಶಿರಸಿಯಿಂದ ಮಂಜುಗುಣಿಗೆ ಹೊರಡಲು ಹಲವಾರು ಖಾಸಗಿ ವಾಹನಗಳು ಲಭ್ಯವಿದ್ದು ಸರಕಾರಿ ಬಸ್ಸುಗಳ ವ್ಯವಸ್ಥೆಯೂ ಇದೆ. ಇದು ಶಿರಸಿಯಿಂದ 27 ಕಿಮೀ ದೂರದಲ್ಲಿದ್ದು ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ. ಅಷ್ಟೇ ಅಲ್ಲ ನೀವು ಮಂಗಳೂರಿನಿಂದ ಈ ಕ್ಷೇತ್ರಕ್ಕೆ ಬರುವುದಾದಲ್ಲಿ ಮೊದಲಿಗೆ ಕುಮಟ ಬಂದು ಅಲ್ಲಿಂದ ಈ ಕ್ಷೇತ್ರಕ್ಕೆ ಬರಲು ಬಸ್ಸುಗಳು ಲಭ್ಯವಿದೆ.
 
ಊಟೋಪಚಾರ ಮತ್ತು ವಸತಿ
 
ಈ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಮಧ್ನಾಹ್ನ ಅನ್ನದಾನವಿದ್ದು, ಉಳಿದಂತೆ ಅಲ್ಲಿಗೆ ತೆರಳುವವರು ತಿನಿಸುಗಳನ್ನು ಒಯ್ಯುವುದು ಒಳ್ಳೆಯದು. ಈ ಸ್ಧಳದಲ್ಲಿ ಅಲ್ಲಲ್ಲಿ ಚಿಕ್ಕಪುಟ್ಟ ಅಂಗಡಿಗಳಿದ್ದು ಊಪಹಾರ ಕೂಡಾ ಸಿಗುತ್ತದೆ ಆದರೆ ಸಂಜೆಯಾದಂತೆ ಇಲ್ಲಿ ಯಾವುದೇ ಊಟೋಪಚಾರದ ವ್ಯವಸ್ಥೆ ಇರುವುದಿಲ್ಲ. ನೀವು ಶಿರಸಿಯಲ್ಲಿ ಅಥವಾ ಕುಮಟಾದಲ್ಲಿ ಸಾಕಷ್ಟು ವಸತಿ ಗೃಹಗಳಿದ್ದು ಇಲ್ಲಿ ನೀವು ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ.
 
ಒಟ್ಟಿನಲ್ಲಿ ಪ್ರಕೃತಿ ಮಧ್ಯ ನಿಂತಿರುವ ಈ ಕ್ಷೇತ್ರ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸೋ ದಿವ್ಯ ಕ್ಷೇತ್ರವಾಗಿದ್ದು, ನೀವು ಒಂದು ಸಲ ಈ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಚಿಕ್ಕ ತಿರುಪತಿಯ ದರ್ಶನವನ್ನು ನೀವು ಪಡೆಯಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments