Select Your Language

Notifications

webdunia
webdunia
webdunia
webdunia

ನನ್ನವಳಿಗೆ ಎಸ್ಎಂಎಸ್ ಕಳುಹಿಸಿದಾಗ...!

ನನ್ನವಳಿಗೆ ಎಸ್ಎಂಎಸ್ ಕಳುಹಿಸಿದಾಗ...!
ನಿಶಿತ್
WD
ಸಂಗಾತಿಯ ಆಯ್ಕೆಯು ಜೀವನದಲ್ಲಿ ಮಹತ್ವಪೂರ್ಣವಾದ ಸಂಗತಿ. ನಾನು ಆ ಘಟ್ಟದಲ್ಲಿದ್ದ ಸಮಯ. ನಾನು ಮತ್ತು ನನ್ನವಳು ಮತ್ತು ಎರಡೂ ಮನೆಯವರು ಮುಖತಃ ಭೇಟಿಯಾಗಿರಲಿಲ್ಲ. ಸಂಬಂಧಿಕರ ಮುಖಾಂತರ ಹಿರಿಯರ ನಡುವೆ ಮಾತುಕತೆಯಷ್ಟೇ ನಡೆದಿತ್ತು. ಹುಡುಗ ಹುಡುಗಿ ಮಾತನಾಡಿ ಒಪ್ಪಿದ ಮೇಲೆಯೇ ಮುಂದಿನ ಕ್ರಮ ಕೈಗೊಳ್ಳೋಣ ಎಂದು ಅವರು ನಿರ್ಧರಿಸಿದ್ದರು. ನನ್ನವಳು ಸೌಮ್ಯ ಸ್ವಭಾವದವಳು ಮತ್ತು ಬೆಂಗಳೂರಿನಲ್ಲಿದ್ದರೂ ಹೈಟೆಕ್ ಸಂಸ್ಕೃತಿಯನ್ನು ಇಷ್ಟಪಡದಳು ಎಂದು ಮೂರನೇ ವ್ಯಕ್ತಿಯ ಮುಖಾಂತರ ತನಿಖೆಯನ್ನೂ ಮಾಡಿದ್ದೆ.!!

ಈ ಸಂದರ್ಭದಲ್ಲೇ ಸಮೀಪಿಸಿತ್ತು ವ್ಯಾಲೆಂಟೈನ್ಸ್ ಡೇ. ಈ ಪಾಶ್ಚಿಮಾತ್ಯ ಆಚರಣೆಯು ಭಾರತದಲ್ಲಿ ಇಷ್ಟು ಬೃಹದಾಕಾರವಾಗಿ ಬೆಳೆದು ಬಂದಿದ್ದೇ ಆಶ್ಚರ್ಯಕರವಾಗಿ ತೋರುತ್ತದೆ. ಮೊದಲಿನಿಂದಲೂ ಇಂತಹ ಆಚರಣೆಗಳನ್ನು ವಿರೋಧಿಸಿಕೊಂಡು ಬಂದಿದ್ದವನು ನಾನು. ಪ್ರೇಮಿಗಳು ತಮ್ಮ ಪ್ರೇಮ ನಿವೇದಿಸಿಕೊಳ್ಳಲು ವಿಶೇಷವಾದ ದಿನವಾದರೂ ಏತಕ್ಕೆ ಎಂಬುದು ನನ್ನ ಪ್ರಶ್ನೆಯಾಗಿದ್ದಿತ್ತು. ಆದರೂ ಆ ದಿನಕ್ಕಾಗಿ ನೀಡುವ ಪ್ರಚಾರ, ಯುವ ಮನಸ್ಸುಗಳನ್ನು ಸೆಳೆಯುವ ಅಬ್ಬರದ ಜಾಹೀರಾತುಗಳು, ಗ್ರೀಟಿಂಗ್ಸ್‌ಗಳು, ಯಾಕೋ ನನ್ನ ಮನಸ್ಸಿನಲ್ಲೂ ತಳಮಳವನ್ನುಂಟು ಮಾಡಿತ್ತು. ಆದ್ದರಿಂದ ನನ್ನವಳಾಗುವವಳಿಗೆ (ಎಂದು ಭಾವಿಸಿದ್ದೆ) ಪ್ರೇಮಿಗಳ ದಿನದಂದು ಶುಭಾಶಯ ಕೋರುವ ಭಾವನೆ ನನ್ನಲ್ಲಿಯೂ ಮೂಡಿತ್ತು. ಇಬ್ಬರ ನಡುವಿನ ಮಾತುಕತೆಗಳು ಇನ್ನೂ ಪೂರ್ಣಗೊಂಡಿರಲಿಲ್ಲವಾದ್ದರಿಂದ, ಇಷ್ಟು ಬೇಗ ಪ್ರೀತಿ ಪ್ರೇಮದ ನನ್ನ ಅರಿಕೆಯು ಸಂಬಂಧವನ್ನು ಮುರಿದು ಬಿಡಬಹುದು ಎಂದು ಹಿಂಜರಿದಿದ್ದೆ. ಮೊದಲೇ ತಾನು, ತನ್ನ ಓದು, ತನ್ನ ಕೆಲಸ ಎಂದು ಅಷ್ಟಕ್ಕೇ ಸೀಮಿತವಾಗಿದ್ದ ನನ್ನ 'ಭಾವಿ' ಪತ್ನಿಗೆ ನನ್ನ ಇಂತಹ ನಡವಳಿಕೆ ಇಷ್ಟವಾಗಲಾರದೇನೋ ಎಂದು ಭಾವಿಸಿದ್ದೆ.

ಅಂದು ಮಧ್ಯಾಹ್ನದವರೆಗೂ ಬೇಕು ಬೇಡಗಳ ಗೊಂದಲದಲ್ಲಿದ್ದ ನಾನು ಹೇಗಾದರೂ ಮಾಡಿ ಪ್ರೇಮಿಗಳ ದಿನದ ಶುಭಾಶಯ ಹೇಳಲೇಬೇಕೆಂದು ನಿರ್ಧರಿಸಿಬಿಟ್ಟೆ. ಮಾತನಾಡಲು ಭಯ. ಉಳಿದಿರುವ ದಾರಿ ಎಸ್‌ಎಂಎಸ್ ಆಗಿತ್ತು. ಈ ಮೊದಲೇ ನನ್ನವಳ ಮೊಬೈಲ್ ನಂಬರ್ ಅನ್ನು ನಾನು ನನ್ನ ಸಂಬಂಧಿಕರಿಂದ ಕೇಳಿ ತಿಳಿದುಕೊಂಡಿದ್ದೆ. ಆದರೆ ಕರೆ ಹಾಗೂ ಎಸ್‌ಎಂಎಸ್ ಅನ್ನು ಮಾಡಿರಲಿಲ್ಲ. ಲವ್ ಯು ಎಂಬಂತಹ ಪ್ರೇಮದ ಅರಿಕೆಯ ಸಂದೇಶ ಕಳುಹಿಸಲು ಹೆದರಿಕೆಯಾಯಿತು, ಅಂತೂ ಕೇವಲ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಬೆರಳಚ್ಚಿಸಿ ಎಸ್‌ಎಂಎಸ್ ಕಳುಹಿಸಿದೆ. ಎದೆ ಢವಗುಡುತ್ತಿತ್ತು. ಅವಳ ತಕ್ಷಣದ ಪ್ರತಿಕ್ರಿಯೆಗೆ ಕಾಯುತ್ತಿದ್ದೆ.

ಆದರೆ ಅವಳಿಂದ ಪ್ರತಿಕ್ರಿಯೆ ಬರಲಿಲ್ಲ. ಮದುವೆಯೇ ಬೇಡವೆಂದು ಹಟ ಹಿಡಿದಂತಹ ಹುಡುಗಿ ಅವಳು ಎಂದು ಸಂಬಂಧಿಗಳಿಂದ ಕೇಳಲ್ಪಟ್ಟಿದ್ದೆ. ಮದುವೆ, ಮಾತುಕತೆಗೆ ಮೊದಲೇ ನನ್ನ ಇಂತಹ ನಡವಳಿಕೆಯು ಅವಳಲ್ಲಿ ನನ್ನ ಬಗ್ಗೆ ಋಣಾತ್ಮಕ ಭಾವನೆಯನ್ನು ಉಂಟುಮಾಡಿತೇನೋ ಎಂದು ಬೆದರಿದೆ. ನನ್ನ ಚಿಕ್ಕಪ್ಪನವರು ಈ ಸಂಬಂಧವನ್ನು ತೋರಿಸಿಕೊಟ್ಟಿದ್ದರಿಂದ ನನ್ನ ಬಗ್ಗೆ ಇವಳು ಅವರ ಬಳಿ ದೂರು ನೀಡಿದ್ದಾಳೇನೋ ಎಂದು ಎರಡು ಗಂಟೆಯ ಬಳಿಕ ಅವರಿಗೆ ಕರೆ ಮಾಡಿ ಖಚಿತಪಡಿಸಿಕೊಂಡೆ. ದೂರು ಬಂದಿರಲಿಲ್ಲವೆಂದು ಖಚಿತವಾಯಿತು. ಆ ಸಂಜೆ ಅವಳಿಂದ ಕೇವಲ ಮಿಸ್ ಕಾಲ್ ಬಂದಾಗಲೇ ನನಗೆ ಸಮಾಧಾನವಾಗಿದ್ದು. ಅವಳು ಬೇರೇನೂ ಪ್ರತಿಕ್ರಿಯಿಸಿರಲಿಲ್ಲ.

ನನ್ನ ಎಸ್‌ಎಂಎಸ್ ಅನ್ನು ಅವಳ ಸ್ನೇಹಿತರಿಗೆ ತೋರಿಸಿ ತನಗಾದ ಸಂತೋಷವನ್ನು ಅವಳು ಅಂದು ಹಂಚಿಕೊಂಡಿದ್ದು ನಂತರ ಗೊತ್ತಾಯಿತು. ವ್ಯಾಲೆಂಟೈನ್ಸ್ ಡೇ ಎಂಬ ಪ್ರೇಮಿಗಳ ಮಹೋತ್ಸವ ಈ ಹುಚ್ಚು ಧೈರ್ಯದ ಮೂಲಕ ಕೊನೆಗೊಂಡಿತ್ತು. ಪಾಶ್ಚಿಮಾತ್ಯ ಆಚರಣೆಯ ಬಗ್ಗೆ ಇಂದಿಗೂ ಮೂಗು ಮುರಿಯುವ ನನ್ನ ಪತ್ನಿ ಅಂದು ನನ್ನ ಸಂದೇಶವನ್ನು ನೋಡಿ ನನ್ನನ್ನು ತಿರಸ್ಕರಿಸಿದ್ದರೆ ಎಂಬ ಯಕ್ಷಪ್ರಶ್ನೆ ಇಂದಿಗೂ ನನಗೆ ಒಮ್ಮೊಮ್ಮೆ ಕಾಡುತ್ತದೆ. ಇಬ್ಬರೂ ಸೇರಿ ಹೇಳಿಕೊಂಡು ನಕ್ಕಿದ್ದೂ ಇದೆ.

ಪ್ರೇಮಿಗಳ ದಿನ ಹಲವು ಯುವ ಪ್ರೇಮಿಗಳನ್ನು ಒಂದಾಗಿಸಿರಬಹುದು, ಹಲವು ಭಗ್ನ ಹೃದಯಗಳನ್ನು ಸೃಷ್ಟಿಸಿರಬಹುದು. ಆದರೆ ಇದು ನನ್ನ ಜೀವನದಲ್ಲಿ, ಅದೂ ಪ್ರಮುಖ ಘಟ್ಟವೊಂದರಲ್ಲಿ ನನಗೆ ವಿಚಿತ್ರ ರೀತಿಯಲ್ಲಿ ಕಾಡಿಸಿದ್ದು ಮಾತ್ರ ಇಂದಿಗೂ ಮರೆಯದೇ ಉಳಿದಿದೆ.

Share this Story:

Follow Webdunia kannada