Select Your Language

Notifications

webdunia
webdunia
webdunia
webdunia

ವೀಳ್ಯದೆಲೆಯ ವಿಧ ವಿಧವಾದ ತಿನಿಸುಗಳು

ವೀಳ್ಯದೆಲೆಯ ವಿಧ ವಿಧವಾದ ತಿನಿಸುಗಳು
ಬೆಂಗಳೂರು , ಮಂಗಳವಾರ, 11 ಸೆಪ್ಟಂಬರ್ 2018 (19:09 IST)
ವೀಳ್ಯದೆಲೆ ಎಂದರೆ ತಕ್ಷಣ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚಾಗಿ ಬಳಸುವ ಎಲೆಯೂ ಇದೇ ಆಗಿದೆ. ಇದು ಪಾಚಿ ಹಸಿರಿನ ಬಣ್ಣದಿಂದ ಕೂಡಿದ್ದು, ತೆಳುವಿನ, ತಣ್ಣಗಿನ, ರಸಭರಿತವಾದ ಒಂದು ಎಲೆ. ಈ ಎಲೆಯು ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲ ಎಂದು ಕರೆಯಿಸಿಕೊಳ್ಳುತ್ತದೆ.

ಅಷ್ಟೇ ಅಲ್ಲದೇ ಸಾಮಾನ್ಯವಾಗಿ ಹವ್ಯಕರ ಮನೆಯಲ್ಲಿ ಕವಳದ ಬಟ್ಟಲಲ್ಲಿ ಕಂಡುಬರುವ ಎಲೆ ಎಂದರೂ ಇದು ತಪ್ಪಾಗಲಾರದು. ವೀಳ್ಯದೆಲೆಯಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅವು ರುಚಿಯಾಗಿಯೂ, ಆರೋಗ್ಯಕರವೂ ಅಗಿರುತ್ತದೆ. ಹಾಗಾದರೆ ವೀಳ್ಯದೆಲೆಯಿಂದ ಏನೇನು ತಯಾರಿಸಬಹುದು ಎಂದು ನೋಡೋಣ..
 
* ವೀಳ್ಯದೆಲೆಯ ಲಡ್ಡು
 
ಬೇಕಾಗುವ ಸಾಮಗ್ರಿಗಳು:
 
ವೀಳ್ಯದೆಲೆ - 8 ರಿಂದ 9
ಕೆಂಪಡಿಕೆ ಚೂರುಗಳು 1 ಚಮಚ
ತುಪ್ಪ 2 ಚಮಚ
ಖರ್ಜೂರ 15
ಗೋಡಂಬಿ 8 ರಿಂದ 9
ಒಣ ದ್ರಾಕ್ಷಿ 10 ರಿಂದ 12
ಬಾದಾಮಿ 7 ರಿಂದ 8
ಸೋಂಪು ಕಾಲು ಚಮಚ
ಸಕ್ಕರೆ 3 ರಿಂದ 4 ಚಮಚ
ಜೇನುತುಪ್ಪ 2 ಚಮಚ
 
ಮಾಡುವ ವಿಧಾನ:
 
ಮೊದಲು ವೀಳ್ಯದೆಲೆಗಳನ್ನು ಒಲೆಯ ಮೇಲಿಟ್ಟು ಸ್ವಲ್ಪ ಬಿಸಿ ಮಾಡಿ ತೆಗೆಯಬೇಕು. ನಂತರ ಬಾಣಲೆಗೆ ತುಪ್ಪ ಹಾಕಿ ಖರ್ಜೂರ ತುಂಡು ಮಾಡಿ ಹಾಕಿ ಹುರಿಯಬೇಕು. ಅದೇ ರೀತಿ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಬಾದಾಮಿ, ಸೋಂಪು ಹಾಕಿ ಹುರಿದು ನಂತರ ವೀಳ್ಯದೆಲೆಯ ಜೊತೆಗೆ ಈ ಎಲ್ಲವನನ್ನೂ ಹಾಕಿ ಅದರ ಜೊತೆಗೆ ಕೆಂಪಡಿಕೆ ಚೂರುಗಳು, ಸಕ್ಕರೆ ಹಾಕಿ ಪುಡಿ ಮಾಡಬೇಕು. ನಂತರ ಜೇನುತುಪ್ಪದೊಡನೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಉಂಡೆಯನ್ನು ಕಟ್ಟಬೇಕು. ಈಗ ರುಚಿಯಾದ ವೀಳ್ಯದೆಲೆಯ ಲಡ್ಡು ಸವಿಯಲು ಸಿದ್ಧ.
 
* ವೀಳ್ಯದೆಲೆಯ ಚಿತ್ರಾನ್ನ
 
ಬೇಕಾಗುವ ಸಾಮಗ್ರಿಗಳು:
 
ಅನ್ನ 1 ಕಪ್
ತೆಂಗಿನ ತುರಿ ಕಾಲು ಕಪ್
ಹಸಿಮೆಣಸು 1 ರಿಂದ 2
ವೀಳ್ಯದೆಲೆ 4 ರಿಂದ 5
ಸಾಸಿವೆ ಅರ್ಧ ಚಮಚ
ಲಿಂಬೆ ರಸ 1 ಚಮಚ
ಒಣ ಮೆಣಸು 2 ತುಂಡು
ಇಂಗು 1 ಚಿಟಿಕೆ
ತುಪ್ಪ ಮತ್ತು ಎಣ್ಣೆ ತಲಾ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
 
ಮಾಡುವ ವಿಧಾನ:
 
1 ಬಾಣಲೆಗೆ ತುಪ್ಪ ಹಾಕಿ, ತೊಳೆದು ಶುಭ್ರಗೊಳಿಸಿದ ವೀಳ್ಯದೆಲೆ ಚೂರುಗಳನ್ನು ಹಾಕಿ ಸ್ವಲ್ಪ ಹುರಿಯಬೇಕು. ನಂತರ ತೆಂಗಿನ ತುರಿ, ಹಸಿಮೆಣಸು, ಇಂಗು, ಹುರಿದ ವೀಳ್ಯದೆಲೆ ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಬಾಕಿ, ಅದಕ್ಕೆ ಸಾಸಿವೆ, ಒಣ ಮೆಣಸು ಹಾಕಿ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ತಿರುವಬೇಕು. ಅದಕ್ಕೆ ಉಪ್ಪು, ಅನ್ನ ಹಾಕಿ ಕೊನೆಯಲ್ಲಿ ಲಿಂಬೆರಸ ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ರುಚಿ ರುಚಿಯಾದ ವೀಳ್ಯದೆಲೆಯ ಚಿತ್ರಾನ್ನ ಸವಿಯಲು ಸಿದ್ಧ.
 
* ವೀಳ್ಯದೆಲೆಯ ಸಾರು
 
ಬೇಕಾಗುವ ಸಾಮಗ್ರಿಗಳು:
 
ವೀಳ್ಯದೆಲೆ 2
ಅರ್ಧ ಚಮಚ ಅರಿಶಿನ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಜೀರಿಗೆ ಪುಡಿ ಅರ್ಧ ಚಮಚ
ಬೆಲ್ಲದ ಪುಡಿ 1 ಚಮಚ
ಬೆಳ್ಳುಳ್ಳಿ 7 ರಿಂದ 8
ಜೀರಿಗೆ ಅರ್ಧ ಚಮಚ/ ತುಪ್ಪ ಅರ್ಧ ಚಮಚ
ಕರಿಬೇವು ಸ್ವಲ್ಪ/ ಲಿಂಬೆ ರಸ 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
 
ಮಾಡುವ ವಿಧಾನ:
 
   ಒಂದು ಪಾತ್ರೆಯಲ್ಲಿ 1 ಕಪ್ ನೀರು ಕುದಿಯಲು ಇಟ್ಟು ಅದಕ್ಕೆ ಅರಿಶಿನ, ಬೆಲ್ಲ, ಉಪ್ಪು ಹಾಕಬೇಕು. ನಂತರ ವೀಳ್ಯದೆಲೆಯ ತೊಟ್ಟು ತೆಗೆದು ಬೆಳ್ಳುಳ್ಳಿ ಜೊತೆಗೆ ಜಜ್ಜಿ, ಜೀರಿಗೆ ಪುಡಿ ಹಾಕಿ, ತುಪ್ಪದಲ್ಲಿ ಕರಿಮೆಣಸಿನ ಪುಡಿ ಹುರಿದು ಕುದಿಯುತ್ತಿರುವ ನೀರಿಗೆ ಹಾಕಬೇಕು. ನಂತರ ಸಣ್ಣ ಉರಿಯಲ್ಲಿ 6 ರಿಂದ 7 ನಿಮಿಷ ಕುದಿಸಬೇಕು. ನಂತರ ತುಪ್ಪದಲ್ಲಿ ಜೀರಿಗೆ, ಸಾಸಿವೆ ಹಾಕಿ ಕರಿಬೇವಿನ ಒಗ್ಗರಣೆಯನ್ನು ಕೊಟ್ಟರೆ ಬಿಸಿಬಿಸಿಯಾದ ರುಚಿರುಚಿಯಾದ ವೀಳ್ಯದೆಲೆಯ ಸಾರು ಸವಿಯಲು ಸಿದ್ದ. 
 
* ವೀಳ್ಯದೆಲೆ ಚಟ್ನಿ
webdunia
ಬೇಕಾಗುವ ಸಾಮಗ್ರಿಗಳು:
 
ವೀಳ್ಯದೆಲೆ 3
ತೆಂಗಿನ ತುರಿ 1 ಕಪ್/ ಬೆಣ್ಣೆ 1 ಚಮಚ
ಹುರಿದ ಕೆಂಪು ಮೆಣಸು 4/ ಅರ್ಧ ಚಮಚ ಹುಣಸೆ ರಸ
ರುಚಿಗೆ ತಕ್ಕಷ್ಟು ಉಪ್ಪು
ಚೂರು ಬೆಲ್ಲ/ ಒಗ್ಗರಣೆಗೆ 1 ಚಮಚ ತುಪ್ಪ
ಅರ್ಧ ಚಮಚ ಸಾಸಿವೆ/ ಜೀರಿಗೆ ಕಾಲು ಚಮಚ
ಅರ್ಧ ಚಮಚ ಉದ್ದಿನ ಬೇಳೆ
 
ಮಾಡುವ ವಿಧಾನ:
 
ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ವೀಳ್ಯದೆಲೆಯ ನಾರು ತೆಗೆದು ಅದರ ಚೂರುಗಳನ್ನು ಸ್ವಲ್ಪ ಹುರಿಯಬೇಕು. ನಂತರ ತೆಂಗಿನ ತುರಿ, ಹುರಿದ ಕೆಂಪು ಮೆಣಸು, ಹುಣಸೆ ರಸ, ಉಪ್ಪು, ಬೆಲ್ಲ ಹುರಿದ ಎಲ್ಲಾ ಚೂರುಗಳನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರನ್ನು ಹಾಕಿ ರುಬ್ಬಬೇಕು. ನಂತರ ಒಗ್ಗರಣೆ ಕೊಡಬೇಕು. ಈ ಚಟ್ನಿಯು ಜೀರ್ಣಶಕ್ತಿಯನ್ನು ಹೆಚ್ಚಿಸಲು ಒಳ್ಳೆಯದು. 

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತವನ್ನು ಶುದ್ಧೀಕರಿಸುವ ಆಹಾರ ಪದಾರ್ಥಗಳ ಬಗ್ಗೆ ತಿಳಿದಿದೆಯೇ?