Select Your Language

Notifications

webdunia
webdunia
webdunia
webdunia

ಕಣ್ಮನ ಸೆಳೆಯುವ ಹೊಗೇನಕಲ್ ಜಲಪಾತ

ಕಣ್ಮನ ಸೆಳೆಯುವ ಹೊಗೇನಕಲ್ ಜಲಪಾತ
ಚೆನ್ನೈ , ಶನಿವಾರ, 22 ನವೆಂಬರ್ 2014 (14:11 IST)
ಹೊಗೇನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ. ಶಿವನಸಮುದ್ರದಲ್ಲಿ ಅದ್ಭುತವಾದ ಜಲಧಾರೆಯನ್ನು ಸೃಷ್ಟಿಸಿ ಪೂರ್ವಾಭಿಮುಖವಾಗಿ ಸಾಗುವ ಕಾವೇರಿ ಮೆಟ್ಟೂರು ಜಲಾಶಯ ಸೇರುವ ಮುನ್ನ ನಯನ ಮನೋಹರ ಜಲಪಾತವನ್ನು ಸೃಜಿಸಿದ್ದಾಳೆ.
 
ಬೇರೆಲ್ಲಾ ಜಲಪಾತಗಳೂ ಮಳೆಗಾಲದಲ್ಲಿ ನದಿ ನೀರು ಹೆಚ್ಚಾದಾಗ ವೀಕ್ಷಿಸಲು ಚೆಂದ. ಆದರೆ ಹೊಗೇನಕಲ್ ಜಲಪಾತ ಮಾತ್ರ ಬೇಸಿಗೆಯಲ್ಲಿ ನದಿ ನೀರು ಕಡಿಮೆಯಾದಾಗ ನೋಡಲು ಸುಂದರ. ಏಕೆಂದರೆ ಮೆಟ್ಟೂರು ಜಲಾಶಯದ ಹಿನ್ನೀರು ಹೊಗೇನಕಲ್‌ವರೆಗೂ ಇದ್ದು, ಬೇಸಿಗೆಯಲ್ಲಿ ಜಲಾಶಯದಿಂದ ನೀರು ತೆರೆದು ಬಿಟ್ಟಾಗ ಹೊಗೇನಕಲ್‌ನಲ್ಲಿ ಹಿನ್ನೀರಿನ ಮಟ್ಟ ಕಡಿಮೆಯಾಗಿ ಜಲಪಾತಗಳು ಇನ್ನೂ ಆಳಕ್ಕೆ ಧುಮುಕಿ ಅವುಗಳ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.
 
ಹೊಗೇನಕಲ್ ತಲುಪಲು ಎರಡು ಮಾರ್ಗಗಳಿವೆ. ಒಂದು ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ, ಇನ್ನೊಂದು ಕೊಳ್ಳೇಗಾಲ-ಮಹೇಶ್ವರ ಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಂ ಬೆಟ್ಟದಿಂದ ಹೊಗೇನಕಲ್‌ಗೆ 47ಕಿ.ಮೀ. ದೂರ. ಸ್ವಂತ ವಾಹನವಿದ್ದರೆ ಮಾತ್ರ ಈ ಮಾರ್ಗ ಅನುಕೂಲ. ಏಕೆಂದರೆ ಮಹದೇಶ್ವರ ಬೆಟ್ಟದಿಂದ ಹೊಗೇನಕಲ್‌ಗೆ ರಸ್ತೆ ಇದೆ, ಸಾರಿಗೆ ಸೌಲಭ್ಯವಿಲ್ಲ. ಆದರೂ ಹೊಗೇನಕಲ್‌ನ ನಿಜವಾದ ಸೌಂದರ್ಯವನ್ನು ಸವಿಯಬೇಕಾದರೆ ಕರ್ನಾಟಕದ ಕಡೆಯಿಂದಲೇ ಪ್ರವೇಶಿಸಬೇಕು.
 
ಮಲೆಮಹೇಶ್ವರ ಬೆಟ್ಟದಿಂದ ಗೋಪಿನಾಥಂ ಮಾರ್ಗವಾಗಿ ಹೊಗೇನಕಲ್ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದ ಗಡಿಯಲ್ಲಿ ಮಾರು ಕೊಟ್ಟಾಯ್ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಜಲಪಾತದ ಬಳಿಗೆ ಹೋಗಲು ಒಂದು ಕಿ.ಮೀ. ದೂರ ನದಿ ಹರಿಯುವ ದಿಕ್ಕಿಗೆ ವಿರುದ್ಧವಾಗಿ ದೋಣಿಯಲ್ಲಿ ಪ್ರಯಾಣ ಮಾಡಬೇಕು.
 
ಆಗಲೇ ನಿಮಗೆ ನಯನ ಸುಂದರ ಜಲಪಾತದ ದೃಶ್ಯ ನಿಮಗೆ ಕಾಣಿಸುತ್ತದೆ. ಕಾವೇರಿಯ ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಅಪೂರ್ವ ನೋಟ. ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು.
ಹೊಗೇನಕಲ್‌ನಲ್ಲಿ ಕಾವೇರಿ ಎರಡು ಶಾಖೆಗಳಾಗಿ, ಪ್ರತಿ ಶಾಖೆಯೂ ಮತ್ತೆ ಹಲವು ಕವಲುಗಳಾಗಿ ಜಲಧಾರೆಯನ್ನು ಸೃಷ್ಟಿಸಿದೆ. 
ಕೆಲವೆಡೆ ಜಲಧಾರೆಗಳು ಬಂಡೆಗಳ ಮೇಲಿನಿಂದ ಹಂತಹಂತವಾಗಿ ಕೆಳಗಿಳಿದು ನೋಡುಗರ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಬೆಳಕಿನ ಪ್ರಖರ ಕಿರಣಗಲು ಬಂಡೆಗಳ ಮೇಲೆ ಬಿದ್ದು ಚದುರುವ ನೀರಿನ ಹನಿಗಳ ಜೊತೆ ಬೆರೆತು ಬಣ್ಣದ ಚಿತ್ತಾರ ಮೂಡಿಸುತ್ತದೆ. ಜಲಪಾತವನ್ನು ಎತ್ತರದಲ್ಲಿ ನಿಂತು ವೀಕ್ಷಿಸಲು ತೂಗು ಸೇತುವೆ ಇದೆ.
 
ರಾತ್ರಿ ಉಳಿದುಕೊಳ್ಳಲು ಇಲ್ಲಿ ಹೋಟೆಲ್, ಲಾಡ್ಜ್‌ಗಳು ಬೇಕಾದಷ್ಟಿವೆ. ಸಾರಿಗೆ ವ್ಯವಸ್ಥೆ, ಆಸ್ಪತ್ರೆ, ಅಂಚೆಕಚೇರಿ, ದೂರವಾಣಿ, ಬ್ಯಾಂಕ್, ತಮಿಳುನಾಡು ಗೆಸ್ಟ್ ಹೌಸ್, ಯೂತ್ ಹಾಸ್ಟೆಲ್ ಸೇರಿದಂತೆ ಎಲ್ಲಾ ಸೇವೆಗಳು ಇಲ್ಲಿ ಲಭ್ಯ.

Share this Story:

Follow Webdunia kannada