Webdunia - Bharat's app for daily news and videos

Install App

ಆಗುಂಬೆಯ ಪ್ರೇಮಸಂಜೆಯ....!!

ಗುರುಮೂರ್ತಿ
ಶುಕ್ರವಾರ, 2 ಫೆಬ್ರವರಿ 2018 (16:41 IST)
ಆಗುಂಬೆ ಎನ್ನೋ ಹೆಸರು ಕೇಳಿದೊಡನೆ ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೆ, ಓ ಗೆಳತಿಯೇ ಎನ್ನೋ ಈ ಹಾಡು ಒಮ್ಮೆಲೇ ನಮಗೆ ನೆನಪಿಗೆ ಬರುತ್ತದೆ. ಹೌದು ಆಗುಂಬೆಯಾ ಸೌಂದರ್ಯ ರಾಶಿಯ ವರ್ಣನೆಯನ್ನು ನೀವು ಈ ಹಾಡಿನಲ್ಲಿ ಕಾಣಬಹುದು. ಕೇಳುವುದಕ್ಕೆ ಈ ಹಾಡು ಇಷ್ಟು ಸೊಗಸಾಗಿರುವಾಗ ಆಗುಂಬೆ ಇನ್ನೂ ನೋಡುವುದಕ್ಕೆ ಹೇಗಿರಬಹುದು ಎನ್ನೋ ಕೂತುಹಲ ಎಲ್ಲರಿಗೂ ಇರುವಂತದ್ದೇ,

ನೀವು ಸಹ ಆಗುಂಬೆಗೆ ಹೋಗಬೇಕು, ಅಲ್ಲಿನ ಸೌಂದರ್ಯ ರಾಶಿಯನ್ನು ಕಣ್ತುಂಬಿಕೊಳ್ಳಬೇಕು ಎಂದು ನೀವು ಬಯಸಿದ್ದರೆ ಈ ವರದಿ ನಿಮಗೆ ಸಹಾಯಕವಾಗಬಹುದು.
 
ಪಶ್ಚಿಮ ಘಟ್ಟಗಳ ನಡುವೆ ತನ್ನ ಸೌಂದರ್ಯ ರಾಶಿಯಿಂದಲೇ ಮನಸೆಳೆಯುವ ಆಗುಂಬೆ ರಜೆಯನ್ನು ಕಳೆಯಲು ಉತ್ತಮ ಸ್ಥಳವೆಂದೇ ಹೇಳಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿರುವ ಜಲಪಾತಗಳು ಸಹ ಆಗುಂಬೆಗೆ ಮೆರಗು ನೀಡಿದ್ದು, ಪ್ರವಾಸಿಗರ ಸ್ವರ್ಗ ಎಂದರು ತಪ್ಪಾಗಲಾರದು.
ಆಗುಂಬೆಯು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಒಂದು ಊರಾಗಿದ್ದು, ಪಶ್ಚಿಮ ಘಟ್ಟಪ್ರದೇಶದಲ್ಲಿದೆ. ಇಲ್ಲಿರುವ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಈ ಪ್ರದೇಶವು ವರ್ಷದ ಅರ್ಧಕ್ಕೂ ಹೆಚ್ಚು ಭಾಗ ಮಳೆಯಿಂದ ಕೂಡಿದ್ದು, ಇಲ್ಲಿ ಫೆಬ್ರುವರಿ ನಂತರದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಆಗುತ್ತದೆ. ಆಗುಂಬೆಯಲ್ಲಿ ವರ್ಷಕ್ಕೆ ಸುಮಾರು 7,620 ಮಿಮೀ. ಮಳೆಯಾಗುವುದರಿಂದ ಇದನ್ನು ದಕ್ಷಿಣದ ಚಿರಾಪುಂಜಿ ಎಂದು ಸಹ ಕರೆಯುತ್ತಾರೆ. ಈ ಪ್ರದೇಶದಲ್ಲಿ ಸೂರ್ಯಾಸ್ತವು ಪ್ರಮುಖ ಆಕರ್ಷಣೆಯಾಗಿದ್ದು ಇದನ್ನು ನೋಡಲೆಂದೇ ಇಲ್ಲಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಗುಂಬೆಯು ಸಮುದ್ರ ಮಟ್ಟದಿಂದ 2,314 ಮೀ ಎತ್ತರವಿದ್ದು ನೋಡಲು ರಮಣೀಯವಾಗಿದೆ. ಅಲ್ಲದೇ ಇಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡುಬರುತ್ತವೆ. ಹೆಸರುವಾಸಿ ಉರಗತಜ್ಞರಾದ ರೊಮುಲುಸ್ ವಿಟೆಕರ್ ಮೊದಲ ಬಾರಿಗೆ ಕಾಳಿಂಗ ಸರ್ಪವನ್ನು ನೋಡಿದ್ದು ಇದೇ ಪ್ರದೇಶದಲ್ಲಂತೆ, ಅಲ್ಲದೇ ಅವರು ಆಗುಂಬೆಯನ್ನು "ಕಾಳಿಂಗ ಸರ್ಪಗಳ ರಾಜಧಾನಿ" ಎಂದು ಕರೆದಿದ್ದಾರೆ.
ಇಲ್ಲಿ 200 ರಿಂದ 300 ಕ್ಕೂ ಹೆಚ್ಚು ವಿವಿಧ ರೀತಿಯ ಮರಗಳು ನೋಡಲು ದೈತ್ಯಾಕಾರವಾಗಿರುವುದನ್ನು ನೀವು ಇಲ್ಲಿ ಕಾಣಬಹುದು. ಮಳೆಗಾಲದ ಸಂದರ್ಭದಲ್ಲಿ ಇಲ್ಲವೇ ಈ ಪ್ರದೇಶದಲ್ಲಿ ಹರಿಯುವ ಜರಿಗಳ ಬಳಿ ಜಿಗಣೆ ಜಾತಿಯ ಉಂಬಳ ಎನ್ನೋ ರಕ್ತಹೀರುವ ಕೀಟವನ್ನು ನೀವು ಈ ಪ್ರದೇಶದಲ್ಲಿ ಕಾಣಬಹುದು. ಇದರ ಸುತ್ತಮುತ್ತದಲ್ಲಿರುವ ಬೆಟ್ಟ ಪ್ರದೇಶದಲ್ಲಿ ಹಲವಾರು ಜಲಪಾತಗಳಿದ್ದು ಅವುಗಳಲ್ಲಿ ಮುಖ್ಯವಾದುದೆಂದರೆ ಕುಂಚಿಕಲ್, ಬರ್ಕನಾ, ಒನಕೆ ಅಬ್ಬಿ ಜಲಪಾತ ಮತ್ತು ಜೋಗಿ ಗುಂಡಿ ಜಲಪಾತವಾಗಿದೆ ಇವು ನೋಡಲು ಆಕರ್ಶಕವಾಗಿದ್ದು ಇದು ಕೂಡಾ ಆಗುಂಬೆಯ ಇನ್ನೊಂದು ಪ್ರಮುಖ ಆಕರ್ಷಣೆ ಎಂದೇ ಹೇಳಬಹುದಾಗಿದೆ.
ಭಾರತದ ಏಕೈಕ ಶಾಶ್ವತ ನಿತ್ಯಹರಿದ್ವರ್ಣವನ ಸಂಶೋಧನ ಕೇಂದ್ರ ಇರುವುದು ಆಗುಂಬೆಯಲ್ಲಿ ಮಾತ್ರ. ಇಲ್ಲಿಯ ರಸ್ತೆಗಳು ಅಂಕುಡೊಂಕಾಗಿದ್ದು ಹಲವು ತಿರುವುಗಳನ್ನು ಹೊಂದಿದೆ. ಇಲ್ಲಿ ರಸ್ತೆಯ ಬದಿಯಲ್ಲಿ ಹೆಚ್ಚಾಗಿ ಮರಗಳಿದ್ದು ಮಳೆಗಾಲದಲ್ಲಿ ಇಲ್ಲಿಗೆ ಪ್ರಯಾಣ ಮಾಡುವಾಗ ಮರ ಮುರಿದು ರಸ್ತೆ ತಡೆಗಳು ಉಂಟಾಗಬಹುದಾದ ಸಂಭವ ಹೆಚ್ಚಾಗಿರುತ್ತದೆ. ಇಲ್ಲಿ ಹೆಚ್ಚಾಗಿ ಬೆತ್ತಗಳು ಲಭ್ಯವಿದ್ದು, ಈ ಪ್ರದೇಶದಲ್ಲಿ ಬೆತ್ತದ ಉದ್ಯಮವನ್ನು ನೀವು ಕಾಣಬಹುದು.
 
ಪುರಾಣದಲ್ಲಿ ಆಗುಂಬೆ
ಆಗುಂಬೆಯು ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆ ಇದೆ. ಅಲ್ಲದೇ ತನ್ನ ತಂದೆಯ ಮರಣಕ್ಕೆ ಕಾರಣನಾದ ಕಾರ್ತವೀರ್ಯಾರ್ಜುನನನ್ನು ಸಂಹರಿಸಿ ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯ ಕುಲವನ್ನೇ ನಿರ್ಮೂಲ ಮಾಡಿದ ನಂತರ ಪಾಪ ಪರಿಹಾರಕ್ಕಾಗಿ ಅಶ್ವಮೇಧಯಾಗವನ್ನು ಮಾಡಿ ತನ್ನಲ್ಲಿರುವ ಸಮಸ್ತ ಭೂಮಿಯನ್ನು ಕಶ್ಯಪ ಋಷಿಗೆ ಧಾರೆಯೆರೆದು ದಾನಕೊಟ್ಟನಂತೆ. ಇದರಿಂದ ತನಗೆ ಉಳಿಯಲು ಜಾಗವಿಲ್ಲದೇ ಆಗುಂಬೆಯ ಸಹ್ಯಾದ್ರಿಶಿಖರದಲ್ಲಿ ನಿಂತು ಎದುರುಗಡೆಯ ಸಮುದ್ರಕ್ಕೆ ಈ ಪರಶು ಹೋದಷ್ಟು ದೂರ ತನಗೆ ಸ್ಥಳಕೊಡು ಎಂದು ಪ್ರಾರ್ಥಿಸಿ ತನ್ನ ಕೊಡಲಿಯನ್ನು ಎಸೆದನಂತೆ. ಎಸೆದ ಪರಶುವು ಸಮುದ್ರ ತೀರದವರೆಗೆ ಹೋಗಿ ಹಿಂದಕ್ಕೆ ಮರಳಿತಂತೆ. ಅಂದಿನಿಂದ ಆ ಭಾಗದ ಪಶ್ಚಿಮ ಕರಾವಳಿಯೆಲ್ಲ ಪರಶುರಾಮ ಕ್ಷೇತ್ರವೆಂದು ಹೆಸರಾಯಿತು ಎಂದು ಹೇಳಲಾಗುತ್ತದೆ.
 
ಆಗುಂಬೆಯ ಮೂಲ ಆಕರ್ಷಣೆಯೇ ಸೂರ್ಯಾಸ್ತ. ಹೌದು ಈ ಜಗತ್‌ಪ್ರಸಿದ್ಧವಾದ ಸೂರ್ಯಾಸ್ತಮಾನದ ದೃಶ್ಯವನ್ನು ಸವಿಯಲು ಬೆಟ್ಟದ ಮೇಲೆ ಒಂದು ಸ್ಥಳವನ್ನು ನಿರ್ಮಿಸಲಾಗಿದೆ. ಈ ದೃಶ್ಯವನ್ನು ನೋಡಲು ದೇಶದಿಂದಷ್ಟೇ ಅಲ್ಲ ವಿದೇಶದಿಂದಲೂ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶದಲ್ಲಿ ನಿಂತು ಕೆಳಕ್ಕೆ ನೋಡಿದರೆ ದಟ್ಟ ಕಾಡುಗಳ ಮೇಲೆ ನಾವು ನಿಂತ ಹಾಗೆ ನಮಗೆ ಭಾಸವಾಗುತ್ತದೆ. ಅಲ್ಲದೇ ಸಂಪೂರ್ಣ ಪಶ್ಚಿಮ ಭಾಗದಲ್ಲಿ ನಿಂತು ಸೂರ್ಯಸ್ತವನ್ನು ನೋಡುತ್ತಿದ್ದಂತೆ ಬಾನೆಲ್ಲಾ ರಂಗೇರುವ ಸೊಬಗನ್ನು ನೀವು ಆಗುಂಬೆಯಲ್ಲಿ ಮಾತ್ರವೇ ಕಾಣಲೂ ಸಾಧ್ಯ. ಅಷ್ಟೇ ಅಲ್ಲ ಪೂರ್ವದಲ್ಲಿ ಉದಯಿಸೋ ಸೂರ್ಯ ತನ್ನ ಕಾಯಕ ಮುಗಿಸಿ ಪಶ್ಚಿಮ ಕಡಲಲ್ಲಿ ಲೀನವಾಗುತ್ತಿದ್ದರೆ ಬಾನಂಗಳದಲ್ಲಿ ನೃತ್ಯವಾಡುವ ಬಣ್ಣಗಳ ಮೋಡಿ ಎಂತಹವರಿಗಾದರೂ ರೋಮಾಂಚನವಾಗದೇ ಇರಲಾರದು.
 
ಹೋಗಲು ದಾರಿ
 
ಆಗುಂಬೆಯು ಶಿವಮೊಗ್ಗದಿಂದ ಸುಮಾರು 94 ಕಿಮೀ ದೂರದಲ್ಲಿದೆ ಇಲ್ಲಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕವು ಬರಬಹುದಾಗಿದೆ.
 
ವಿಮಾನ ಮಾರ್ಗದ ಮೂಲಕ ಬರುವವರಿಗೆ ಹತ್ತಿರದ ನಿಲ್ದಾಣ ಮಂಗಳೂರು ಆಗಿದ್ದು ಅಲ್ಲಿಂದ ಆಗುಂಬೆಗೆ ಸುಮಾರು 93 ಕಿಮೀ ಅಂತರವಿದೆ. ಅಲ್ಲಿಂದ ಆಗುಂಬೆಗೆ ಬರಲು ಕ್ಯಾಬ್ ಮತ್ತು ಬಸ್ ವ್ಯವಸ್ಥೆ ಕೂಡಾ ಇದೆ. ರೈಲು ಮಾರ್ಗದ ಮೂಲಕ ಅಗುಂಬೆಗೆ ಬರಲು ಉಡುಪಿ ನಿಮಗೆ ಹತ್ತಿರದ ನಿಲ್ದಾಣವಾಗಿದೆ. ಅಲ್ಲಿಂದ ಸುಮಾರು 53 ಕಿ,ಮೀ ದೂರದಲ್ಲಿ ಆಗುಂಬೆ ಇದೆ. ಉಡುಪಿಯಿಂದ ಆಗುಂಬೆಗೆ ಸಾಕಷ್ಟು ಬಸ್ಸುಗಳ ವ್ಯವಸ್ಥೆಯಿದ್ದು ಸುಲಭವಾಗಿ ನೀವು ಇಲ್ಲಿ ಬಂದು ಸೇರಿಕೊಳ್ಳಬಹುದು. ಬೆಂಗಳೂರಿನಿಂದ ಬರುವವರಿಗೆ ಬೆಂಗಳೂರಿನಿಂದ ಮಂಗಳೂರು ಅಥವಾ ಉಡುಪಿಗೆ ನೇರವಾದ ಬಸ್ಸುಗಳು ಲಭ್ಯವಿದ್ದು ಸುಲಭವಾಗಿ ಈ ಸ್ಥಳವನ್ನು ನೀವು ತಲುಪಬಹುದು.
 
ಊಟೋಪಚಾರ ವ್ಯವಸ್ಥೆ 
 
ಆಗುಂಬೆಯಲ್ಲಿ ಉಳಿದುಕೊಳ್ಳಲು ಸಾಕಷ್ಟು ವಸತಿ ಗೃಹಗಳಿದ್ದು ಮೊದಲೇ ರೂಂಗಳನ್ನು ಕಾಯ್ದಿರಿಸುವುದು ಉತ್ತಮ ಅಲ್ಲದೇ ಇಲ್ಲಿಯ ಮಲೆನಾಡಿನ ಊಟ ಪ್ರವಾಸದ ಜೊತೆಗೆ ಬಾಯಿರುಚಿಯನ್ನು ಹೆಚ್ಚಿಸುವುದಲ್ಲದೇ ಇಲ್ಲಿನ ಅಡುಗೆಗಳು ನಿಮಗೆ ಒಂದು ನೆನಪಾಗಿರಬಲ್ಲದು.
 
ಒಟ್ಟಿನಲ್ಲಿ ಮೋಡ ಮುಸುಕಿದ ವಾತಾವರಣ, ಅಕ್ಕಪಕ್ಕ ಹಚ್ಚ ಹಸಿರಿನ ಬೆಟ್ಟದ ಸಾಲುಗಳು, ಇದರ ನಡುವೆ ಮನಕ್ಕೆ ತಂಪೆರಗುವ ಇಬ್ಬನಿ, ಮಧ್ಯೆ ಮಧ್ಯೆ ಸಣ್ಣದಾಗಿ ಸುರಿಯುವ ಮಳೆ ಹಾಗೂ ಮುಳುಗುತ್ತಿರುವ ಸೂರ್ಯ, ಇವೆಲ್ಲವನ್ನು ನೀವು ನೋಡಿ ಪ್ರಕೃತಿಯ ರಮಣೀಯತೆಯನ್ನು ಅನುಭವಿಸಬೇಕು ಎಂದರೆ ನೀವು ಒಮ್ಮೆ ಆಗುಂಬೆಗೆ ಭೇಟಿ ನೀಡಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments