Select Your Language

Notifications

webdunia
webdunia
webdunia
webdunia

ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳು ಹಾವಳಿ: ಹತೋಟಿಗೆ ಹೀಗೆ ಮಾಡಿ

ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳು ಹಾವಳಿ: ಹತೋಟಿಗೆ ಹೀಗೆ ಮಾಡಿ
ಕಲಬುರಗಿ , ಬುಧವಾರ, 14 ನವೆಂಬರ್ 2018 (19:29 IST)
ಕಲಬುರಗಿ ಜಿಲ್ಲೆಯಲ್ಲಿ ಜೋಳದ ಬೆಳೆಗೆ ಫಾಲ್ ಸೈನಿಕ ಹುಳು ಎಂಬ ಹೊಸ ಕೀಟದ ಹಾವಳಿಯು ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡು ಬಂದಿದ್ದು, ಈ ಫಾಲ್ ಸೈನಿಕ ಹುಳಗಳ ಹಾವಳಿ ತಡೆಯಲು ರೈತರು ಕೆಳಕಂಡ ಹತೋಟಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಈ ಕೀಟವು ಮೂಲತ ಅಮೇರಿಕಾದ ಕೀಟವಾಗಿದ್ದು, 2016ನೇ ಇಸವಿಯಲ್ಲಿ ಆಫ್ರಿಕಾ ಖಂಡದ ಕೆಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಿರುತ್ತದೆ. ಈ ಕೀಟವು ಪ್ರಮುಖವಾಗಿ ಮೆಕ್ಕೆಜೋಳದ ಪೀಡೆಯಾಗಿದ್ದು, ಭತ್ತ, ಜೋಳ, ಹತ್ತಿ ಮತ್ತು ಕೆಲವು ತರಕಾರಿ ಬೆಳೆಗಳನ್ನು ಹಾನಿ ಮಾಡುತ್ತದೆ. ಮೋಡದ ವಾತಾವರಣ, ಹೆಚ್ಚಿನ ಮಳೆ, ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಮತ್ತು ಕಡಿಮೆ ಉಷ್ಣಾಂಶದಿಂದ ಇದರ ಹಾವಳಿ ಹೆಚ್ಚಾಗುತ್ತದೆ. ಮುಂಚಿತವಾಗಿ ಬಿತ್ತನೆಯಾದ ಪ್ರದೇಶದಲ್ಲಿ ಇದರ ಹಾವಳಿ ಕಡಿಮೆ ಇದ್ದು, ತಡವಾಗಿ ಬಿತ್ತನೆ ಪ್ರದೇಶದಲ್ಲಿ ಇದರ ಹಾವಳಿ ಹೆಚ್ಚಾಗಿರುತ್ತದೆ. ಅಲ್ಲದೇ, ಮೆಕ್ಕೆಜೋಳದಲ್ಲಿ ಇದರ ಹಾನಿ ಹೆಚ್ಚು.

ಜೀವನ ಚಕ್ರ: ಈ ಕೀಟವು ಮೊಟ್ಟೆಗಳನ್ನು ಗುಂಪಾಗಿ ಇಡುತ್ತಿದ್ದು, ಒಂದು ಹೆಣ್ಣು ಪತಂಗವು ಸುಮಾರು 900-1500 ಮೊಟ್ಟೆ ಇಡುತ್ತದೆ. ಮರಿ ಹುಳದ ಜೀವತಾವಧಿ ಸುಮಾರು 20 ದಿನವಾಗಿದ್ದು, ಒಂದು ತಿಂಗಳಿನಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸುತ್ತದೆ.

ಹಾನಿಯ ಲಕ್ಷಣ: ಈ ಕೀಟವು ಮುಖ್ಯವಾಗಿ ಮೆಕ್ಕೆಜೋಳದ ಸುರಳಿಯಲ್ಲಿ ಅತೀ ಹೆಚ್ಚು ಹಾನಿಯನ್ನು ಉಂಟು ಮಾಡಿ ಮೊದಲೆರಡು ಹಂತದ ಮರಿಹುಳುಗಳಿಂದ, ಹೊರಬರುವ ಎಲೆಗಳ ಮೇಲೆ ರಂಧ್ರಗಳನ್ನು ಕಾಣಬಹುದು. ಮೊರನೇ ಮತ್ತು ನಾಲ್ಕನೇ ಹಂತದ ಹುಳುಗಳು ಎಲೆಗಳನ್ನು ಅಂಚನ್ನು ತಿನ್ನುವುದರಿಂದ ಎಲೆಗಳು ಹರಿದಂತೆ ಕಾಣುತ್ತದೆ.

ಹತೋಟಿ ಕ್ರಮಗಳು: ದೊಡ್ಡ ಹಂತದ ಮರಿಹುಳುಗಳು ಕಂಡುಬಂದರೆ ಕೈಯಿಂದ ಆರಿಸಿ ನಾಶಪಡಿಸಬಹುದು. ಜೈವಿಕ ಶೀಲೀಂದ್ರ ಕೀಟನಾಶಕಗಳಾದ ನೊಮೊರಿಯಾ ರಿಲೈ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೆ ಯನ್ನು 2 ಗ್ರಾಂ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬಹುದು. ಹೊಲದಲ್ಲಿ ದೀಪಾಕರ್ಷಕ ಬಲೆಗಳನ್ನು ಅಲ್ಲಲ್ಲಿ ಆಳವಡಿಸಿ ಆಕರ್ಷಿಸಿ ನಾಶಪಡಿಸಬಹುದು. ಮೋನೊಕ್ರೋಟೋಪಾಸ್ ವಿಷ ಪಾಷಾಣವನ್ನು ತಯಾರಿಸಿ ಮೆಕ್ಕೆಜೋಳದ/ಸುಳಿಗೆ ಹಾಕಬೇಕು. ವಿಷಪಾಷಾಣವನ್ನು ತಯಾರಿಸಲು 2 ಕೆ.ಜಿ. ಬೆಲ್ಲವನ್ನು ಪುಡಿಮಾಡಿ 4 ಲೀ. ನೀರಿನಲ್ಲಿ ಕರಗಿಸಿ 250 ಮಿ.ಲೀ. ಮೋನೊಕ್ರೊಟೋಫಾಸ್ 36 ಎಸ್.ಎಲ್. ಕೀಟನಾಶಕವನ್ನು ಸೇರಿಸಬೇಕು. ಈ ಮಿಶ್ರಣವನ್ನು 20 ಕೆ.ಜಿ. ಭತ್ತ/ಗೋಧಿ ತೌಡಿನಲ್ಲಿ ಬೆರೆಸಿ ಚೆನ್ನಾಗಿ ಕಲಸಿ ಗಾಳಿಯಾಡದಂತೆ 48 ಗಂಟೆಗಳ ಕಾಲ ಗೊಬ್ಬರದ ಚೀಲ ಅಥವಾ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ಮುಚ್ಚಿಟ್ಟು ಕಳಿಯಲು ಬಿಡಬೇಕು. ಈ ರೀತಿ ತಯಾರಿಸಿ ಪಾಷಾಣವನ್ನು ಮೆಕ್ಕೆಜೋಳದ ಸುಳಿಯಲ್ಲಿ ಹಾಕಬೇಕು.

ರಾಸಾಯನಿಕ ಕೀಟನಾಶಕಗಳಾದ ಸೈಪರಮೆಥ್ರಿನ್ 10 ಇ.ಸಿ. 1 ಮಿ.ಲೀ. ಅಥವಾ ಕ್ಲೋರ್‍ಪೈರಿಪಾಸ್ 20 ಇ.ಸಿ. 2ಮಿ.ಲೀ. ಅಥವಾ ಲ್ಯಾಮ್ಡಸೈಹ್ಯಾಲೋಥ್ರಿನ್ 5ಇ.ಸಿ. 1 ಮಿ.ಲೀ. ಅಥವಾ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜೆ. 0.4 ಮಿ.ಗ್ರಾಂ. ಅಥವಾ ಸ್ಟೈನೋಸ್ಯಾಡ್ 45 ಎಸ್.ಸಿ. 0.2 ಮಿ.ಲೀ. ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಥವಾ ಕಲಬುರಗಿ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ದಿನಾಚರಣೆ ದಿನವೇ ಅನಾಥವಾದ ನವಜಾತ ಹೆಣ್ಣು ಶಿಶು