Select Your Language

Notifications

webdunia
webdunia
webdunia
webdunia

ತುಂಬಾ ಸೀರಿಯಸ್ಸಾಗ್ಬೇಡಿ...ಸ್ವಲ್ಪ ನಕ್ಕುಬಿಡಿ!

ತುಂಬಾ ಸೀರಿಯಸ್ಸಾಗ್ಬೇಡಿ...ಸ್ವಲ್ಪ ನಕ್ಕುಬಿಡಿ!
ಚೆನ್ನೈ , ಗುರುವಾರ, 20 ನವೆಂಬರ್ 2014 (13:28 IST)
ಕಾಲಚಕ್ರ ಉರುಳಿದ ಹಾಗೆ ನಮ್ಮ ಬೇಕು, ಬೇಡಗಳ ಪಟ್ಟಿಯೂ ಬೆಳೆಯುತ್ತಲೇ ಹೋಗುತ್ತದೆ. ಜಿಡ್ಡು ಕೃಷ್ಣಮೂರ್ತಿ ಅವರು ಹೇಳುವಂತೆ ಬಾಲ್ಯದಿಂದ ಸಾಯುವವರೆಗೂ ನಾವು ಗುಪ್ತವಾಗಿಯೋ, ಕಪಟವಾಗಿಯೋ ಅಥವಾ ನೇರವಾಗಿಯೋ ಆಗಿ ಸುಖವನ್ನು ಬೆನ್ನಟ್ಟಿದ್ದೇವೆ. ಏಕೆಂದರೆ ಅದೇ ನಮ್ಮ ಬದುಕನ್ನು ರೂಪಿಸುತ್ತದೆ ಹಾಗೂ ನಮ್ಮ ಮಾರ್ಗವನ್ನು ನಿರ್ದೇಶಿಸುತ್ತದೆ. ಸುಖವನ್ನು ಹುಡುಕಿ ಅದನ್ನು ಪುಷ್ಟಿಗೊಳಿಸಿ, ಉಳಿಸಿಕೊಂಡು ಹೋಗುವದು ಬದುಕಿನ ಮೂಲಭೂತ ಬೇಡಿಕೆಯಾಗಿದೆ. ಅದಿಲ್ಲದಿದ್ದರೆ ಬದುಕು ನೀರಸ, ಜಡ, ಏಕಾಕಿ ಹಾಗೂ ಅರ್ಥಹೀನವಾಗುತ್ತದೆ!
 
ಹೌದಲ್ಲ ಮನುಷ್ಯ ಒಂದಿಲ್ಲೊಂದು ತರಹದ ಸುಖದ ಬೆನ್ನಟ್ಟುವ ಮೂಲಕ ನಾವು ಸದಾ ಆಲೋಚನೆಯಲ್ಲಿಯೇ ಕಾಲಕಳೆಯ ತೊಡಗುತ್ತಿದ್ದೇವೆ. ನಮಗೆ ನಗಲು ಪುರುಸೊತ್ತಾದರೂ ಎಲ್ಲಿ. ಇನ್ನೂ ಕೆಲವೆಡೆ ಕೆಲಸ ಮಾಡುವ ನೌಕರರಿಗೆ ಮಾತು, ನಗು ಹೋಗಲಿ ಆಕಾಶ ತಲೆ ಮೇಲೆ ಬಿದ್ದವರ ಹಾಗೆ ಆಡುತ್ತಿರುವುದನ್ನು ನೋಡುತ್ತಿರುತ್ತೇವೆ. ನಗು ಮರೆತು ಹೋಗಿದ್ದರ ಪರಿಣಾಮ ಇಂದು ನಗೆಕೂಟಗಳಿಗೆ ಹೋಗಿ ಜನರು ನಗುತ್ತಿದ್ದಾರೆ!. ಹಾಗಾಗಿ ನಾವೆಲ್ಲ ಜೀವಂತವಾಗಿದ್ದು ಜೀವರಹಿತವಾಗಿರುವ ಕುರಿತು ರಜನೀಶ್ ತುಂಬಾ ಉತ್ತಮವಾಗಿ ಹಾಸ್ಯದ ಉದಾಹರಣೆ ಮೂಲಕ ವಿವರಿಸಿದ್ದಾರೆ. ಒಬ್ಬ ಕಡು ಬಡವ ನಸುರುದ್ದೀನ್ ಬಳಿ ಬಂದು 'ನನಗೆ ಬದುಕುವುದೇ ಕಷ್ಟವಾಗಿದೆ ನಾವೀಗ ಆತ್ಮಹತ್ಯೆ ಮಾಡಿಕೊಳ್ಳಲೇ? ನನಗೆ ಆರು ಮಕ್ಕಳು, ಒಬ್ಬಳು ಹೆಂಡತಿ, ಒಬ್ಬಳು ವಿಧವೆ ಅಕ್ಕ ಮತ್ತು ವಯಸ್ಸಾದ ತಂದೆ-ತಾಯಿ, ಬರಬರುತ್ತಾ ಅತ್ಯಂತ ಕಷ್ಟವಾಗಿದೆ ಸಂಸಾರ ನಡೆಸುವುದು, ನೀನೇನಾದರೂ ಸಲಹೆ ಕೊಡುವೆಯೇನು?'
 
ಅದಕ್ಕೆ ನಸುರುದ್ದೀನ್ ಹೇಳಿದ, ನೀನು ಎರಡು ಕೆಲಸಗಳನ್ನು ಮಾಡಬಹುದು. ಒಂದು ಬ್ರೆಡ್ ಮಾಡಿ ಮಾರು, ಏಕೆಂದರೆ ಜನರು ಬದುಕಲು ತಿನ್ನಲೇಬೇಕು, ನಿನಗೂ ವ್ಯಾಪಾರ ಖಾಯಂ. ಆ ಮನುಷ್ಯ ಹೇಳಿದ ಮತ್ತೊಂದು...ನಸುರುದ್ದೀನ್ ಅದಕ್ಕೆಂದ, ಪ್ರೇತವಸ್ತ್ರಗಳನ್ನು ಸತ್ತವರಿಗಾಗಿ ಮಾಡು, ಏಕೆಂದರೆ ಜನರು ಜೀವಂತವಾಗಿ ಇರುವಾಗಲೇ ಅವರು ಸಾಯುವರು. ಮತ್ತಿದು ಸಹ ಒಳ್ಳೆಯ ವ್ಯಾಪಾರವೇ ಎಂದ.
 
ತಿಂಗಳಾಯಿತು, ಬಡವ ಪುನಃ ಇವನ ಬಳಿ ಬಂದ ಈಗ ಇನ್ನೂ ಹೆಚ್ಚಿನ ತಳಮಳ, ದುಃಖದಿಂದ ಇದ್ದ. ಆತ ಹೇಳಿದ ಯಾವುದೂ ಕೆಲಸ ಮಾಡುವ ಹಾಗೆ ಕಾಣುವುದಿಲ್ಲ. ನನ್ನಲ್ಲಿದ್ದ ಎಲ್ಲವನ್ನು ಈ ವ್ಯಾಪಾರಗಳಿಗೆ ಹಾಕಿದೆ. ನೀನು ಹೇಳಿದಂತೆಯೇ ಮಾಡಿದೆ. ಆದರೂ ಏನೂ ಪ್ರಯೋಜನವಾಗಲಿಲ್ಲ. 
 
ನಸುರುದ್ದೀನ್ ಹೇಳಿದ, ಹೀಗಾಗಲೂ ಹೇಗೆ ಸಾಧ್ಯ? ಜನರು ಬದುಕಿರುವಾಗ ಬ್ರೆಡ್ ತಿನ್ನಲೇಬೇಕು, ಮತ್ತವರು ಸತ್ತಾಗ ಅವರ ಬಂಧುಗಳು ಈ ಪ್ರೇತವಸ್ತ್ರವನ್ನು ಸತ್ತವರಿಗಾಗಿ ಕೊಂಡುಕೊಳ್ಳಲೇಬೇಕು. ಆ ಬಡವ ಹೇಳಿದ, ನನಗಿದು ಅರ್ಥವಾಗುತ್ತಿಲ್ಲ. ಈ ಹಳ್ಳಿಯಲ್ಲಿ ಯಾರೂ ಸಹ ಜೀವಂತವಾಗಿಯೂ ಇಲ್ಲ ಮತ್ತು ಯಾರೂ ಸಾಯುವುದೂ ಇಲ್ಲ. ಇವರು ಜೀವನವನ್ನು ಎಳೆಯುತ್ತಾ ಸಾಗುತ್ತಿರುವರು!
 
ಜನರು ದಿನ ನೂಕುತ್ತಿರುವರಷ್ಟೆ ನೀವು ಬೇರೆಯವರ ಮುಖ ನೋಡುವ ಅಗತ್ಯವಿಲ್ಲ, ನಿಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ ಸಾಕು. ಆಗ ನಿಮಗೇ ತಿಳಿಯುವುದು ದಿನ ನೂಕುತ್ತಿರುವುದೆಂದರೆ ಏನೆಂದು-ಒಂದೋ ಜೀವಂತವಾಗಿಯೂ ಇಲ್ಲ ಅಥವಾ ಸಾಯಲೂ ಇಲ್ಲ. ಜೀವನ ಅತ್ಯಂತ ಸುಂದರ, ಸಾವೂ ಕೂಡ ಅತ್ಯಂತ ಸುಂದರ- ಆದರೆ ದಿನ ನೂಕುವುದು ವಿಲಕ್ಷಣ. ಆದರೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ನೀವೇಕಿರುವಿರಿ? ಜೀವನದಲ್ಲಿ ನಗು, ಉಲ್ಲಾಸಕ್ಕೂ ಕೊರತೆಯೇ? ನಾವೀಗ ಸದಾ ಬದುಕಿನ ನಾಗಾಲೋಟದಲ್ಲಿ ಒಂಟಿಯಾಗಿಯೇ ಇರಲು ಬಯಸುತ್ತೇವೆ ವಿನಃ, ನಗು, ಹರಟೆ, ಪ್ರವಾಸ, ಉಲ್ಲಾಸ ಬೇಡವಾಗಿದೆ.
 
ನಗು ಆರೋಗ್ಯ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಈ ಅಂಶವನ್ನು ವೈದ್ಯಕೀಯ ಸಂಶೋಧನೆಗಳು ಖಚಿತಪಡಿಸಿವೆ. ಮನಸ್ಸು ಉಲ್ಲಾಸಿತವಾಗಿರಲು, ಹೃದಯ ಕಾಯಿಲೆ ದೂರ ಇಡಲು ನಗು ಸಿದ್ದೌಷಧ ಎಂದು. ಹಾಗಂತ ನಗಲು ಹಾಸ್ಯದ ಚುಟುಕೇ ಬೇಕೆಂದಿಲ್ಲ. ನಾವು ದೈನಂದಿನ ಬದುಕಿನಲ್ಲಿ ಮಾಡಿಕೊಳ್ಳುವ ಯಡವಟ್ಟುಗಳು, ಪರಿಪಾಟಲು ಕೂಡ ನಮ್ಮ ನಗುವಿಗೆ ವಸ್ತುವಾಗಬಹುದು. ಆದರೆ ನಾವು ಹಾಗೇ ಇರಲು ಬಯಸುವುದಿಲ್ಲ. ಸದಾ ಗಂಭೀರವಾಗಿಯೋ, ಚಿಂತೆಯಲ್ಲಿಯೋ ಕಾಲ ಕಳೆಯುತ್ತಿರುತ್ತೇವೆ. ಹಾಗಂತ ನೀವೀಗ ಚಿಂತೆ ಮಾಡುವಂತೆ ಮಾಡುವುದು ಈ ಲೇಖನದ ಉದ್ದೇಶವಲ್ಲ, ಇಲ್ಲಿ ಕೆಲವು ನಗೆ ಚುಟುಕು ನೀಡಲಾಗಿದೆ. ಓದಿ....ನಕ್ಕುಬಿಡಿ...ಕೋಪ ಮಾಡಿಕೊಂಡರೆ ನಿಮಗೆ ನಷ್ಟ!
 
'ಮುಲ್ಲಾನ ಹೆಂಡತಿ ಮರಣಶಯ್ಯೆಯಲ್ಲಿದ್ದಳು, ವೈದ್ಯರು ಕೇಳಿದರಂತೆ, ಮುಲ್ಲಾ ನಾನು ನಿಜ ಹೇಳಬೇಕು ನಿನಗೆ. ಇಂತಹ ಕ್ಷಣಗಳಲ್ಲಿ ಸತ್ಯ ನುಡಿಯುವುದು ಒಳ್ಳೆಯದು. ನಿನ್ನ ಹೆಂಡತಿಯನ್ನು ಉಳಿಸಿಕೊಳ್ಳಲಾಗದು. ಕಾಯಿಲೆ ಮಿತಿಮೀರಿದೆ. ನೀನು ಇದಕ್ಕೆ ಸಿದ್ದನಾಗಿರಬೇಕು. ನೀನು ತೊಂದರೆಗೊಳಗಾಗಬೇಡ, ಸಂಕಟ ಪಡಬೇಡ, ನೀನಿದನ್ನು ಸ್ವೀಕರಿಸು, ಇದು ನಿನ್ನ ಹಣೆಬರಹ' ಎಂದರು.
 
ಆಗ ಮುಲ್ಲಾ ಹೇಳಿದ...ಚಿಂತಿಸಬೇಡಿ, ನಾನು ಅವಳೊಂದಿಗೆ ಇಷ್ಟು ವರ್ಷ ನರಳಿರುವೆ, ಇನ್ನು ಕೆಲವು ಗಂಟೆಗಳ ಕಾಲ ನರಳಾಟ ಸಹಿಸಿಕೊಳ್ಳಬಹುದು ಎಂದನಂತೆ!
 
'ಓರ್ವ ವ್ಯಕ್ತಿ ಈಶ್ವರನಿಗೆ ಪತ್ರ ಬರೆದನಂತೆ. ಅವನಿಗೆ ಜರೂರಾಗಿ ಐವತ್ತು ರೂಪಾಯಿಗಳು ಬೇಕಿದ್ದವು. ಈಶ್ವರನ ವಿಳಾಸ ಅವನಿಗೆ ಗೊತ್ತಿಲ್ಲವಾದ್ದರಿಂದ ಅವನು- ಗೆ- ಶ್ರೀ ಪರಮಪಿತ ಪರಮೇಶ್ವರ ಕೇರಾಫ್ ಪೋಸ್ಟ್ ಮಾಸ್ಟರ್-ಎಂದಿಷ್ಟೆ ಬರೆದು ಅಂಚೆ ಡಬ್ಬಿಗೆ ಹಾಕಿದ. ಪೋಸ್ಟ್ ಮಾಸ್ಟರಿಗೆ ಹೇಗೋ ವಿಳಾಸ ಗೊತ್ತಿರಬಹುದೆಂದು ಅವನ ಎಣಿಕೆ. ಪೋಸ್ಟ್ ಮಾಸ್ಟರ್ ಆ ಪತ್ರವನ್ನು ಒಡೆದು ನೋಡಿದರು.ಇದೆಂತಹಾ ಪತ್ರ! ಇದನ್ನು ಕಳಿಸುವುದಾದರೂ ಯಾರಿಗೆ? ಪತ್ರವನ್ನೋದಿ ಅವರಿಗೆ ಪತ್ರ ಬರೆದವನ ಮೇಲೆ ಕರುಣೆ ಹುಟ್ಟಿತು. ನಿಜವಾಗಿ ಅವನು ತುಂಬ ತೊಂದರೆಯಲ್ಲಿರಬೇಕು. ಅದರಲ್ಲಿ ಅವನು ತನ್ನ ತಾಯಿ ರೋಗದಿಂದ ಬಳಲುತ್ತ ಮರಣಶಯ್ಯೆಯಲ್ಲಿ ಮಲಗಿರುವಳೆಂದೂ, ಔಷಧಿಯೋ...ಹಣ್ಣುಹಂಪಲು ತರೋಣವೆಂದರೆ ನನ್ನ ಬಳಿ ಐದು ಪೈಸೆ ಸಹ ಇಲ್ಲ. ಈ ಒಂದೇ ಒಂದು ಬಾರಿ ದೇವರು ದಯವಿಟ್ಟು ಐವತ್ತು ರೂಪಾಯಿಗಳನ್ನು ಕಳುಹಿಸಿಕೊಡಲೆಂದೂ ಮತ್ತೆಂದೂ ತಾನು ದೇವರೊಂದಿಗೆ ಮತ್ತೇನೂ ಬೇಡುವುದಿಲ್ಲ ಎಂದು ಅದರಲ್ಲಿ ಅವನು ಬಿನ್ನೈಸಿಕೊಂಡಿದ್ದ'.
 
ಈ ವ್ಯಕ್ತಿ ಪಾಪ! ನಿರಾಶನಾಗದಂತೆ ಇದಕ್ಕೇನಾದರೂ ಮಾಡಬೇಕು ಎಂದುಕೊಂಡ ಪೋಸ್ಟ್ ಮಾಸ್ಟರ್, ಅವರು ಸಹ ಅಷ್ಟೇನೂ ಹಣವಂತನಲ್ಲ, ಅವನು ಪೋಸ್ಟಾಫೀಸಿನ ಬೇರೆಯ ನೌಕರರಿಂದಲೂ ಚಂದಾ ಎತ್ತಿ ನಲ್ವತ್ತೈದು ರೂಪಾಯಿಗಳನ್ನು ಕೂಡಿಸಿದ. ನಲ್ವತ್ತೈದು ರೂಪಾಯಿಯೇನೂ ಕಡಿಮೆಯಾಗಲಿಲ್ಲ. ಏನೂ ಇಲ್ಲದುದಕ್ಕಿಂತ ಇಷ್ಟಾದುದು ಮೇಲು ಎಂದುಕೊಂಡು ಆ ಹಣವನ್ನು ಆತನಿಗೆ ಕಳುಹಿಸಿಕೊಟ್ಟ. ಆದರೆ ಮನಿ ಆರ್ಡರ್ ಪಡೆದ ಆ ವ್ಯಕ್ತಿಗೆ ಸಿಟ್ಟು ಬಂತು. ಅವನು ಈಶ್ವರನಿಗೆ ಹೇಳಿದ, ನಾನು ಹೇಳುವುದನ್ನು ಕೇಳು. ಇನ್ನು ಮುಂದೆ ನೀನು ಹಣ ಕಳಿಸುವಾಗ ಪೋಸ್ಟ್ ಆಫೀಸ್ ಮುಖಾಂತರ ಕಳಿಸಬೇಡ. ಏಕೆಂದರೆ ಅವರು ತಮ್ಮ ಐದು ರೂಪಾಯಿ ಕಮಿಷನ್ ಮುರಿದುಕೊಂಡು ನನಗೆ ಹಣ ಕಳಿಸಿದ್ದಾರೆ!
 
'ಮುಂಜಾನೆ ಮೂರು ಗಂಟೆಗೆ ಮುಲ್ಲಾ ನಸುರುದ್ದೀನ್ ಬಾರ್‌ಗೆ ಫೋನ್ ಮಾಡಿ ಕೇಳಿದ, ಬಾರ್‌ನ ಬಾಗಿಲು ತೆಗೆಯುವುದು ಎಷ್ಟು ಗಂಟೆಗೆ ? ಬಾರ್ ಅಟೆಂಡರ್ ಹೇಳಿದ. ಇದು ಸಮಯವಲ್ಲ ನಿನಗೆ ಉತ್ತರಿಸಲು, ನೀನೋ ಪ್ರತಿ ದಿನದ ಗ್ರಾಹಕ ನಸುರುದ್ದೀನ್ ಮತ್ತು ನಿನಗಿದೂ ಗೊತ್ತಿದೆ ನಾವು ಒಂಬತ್ತು ಗಂಟೆ ಮುಂಚೆ ಬಾಗಿಲು ತೆಗೆಯುವುದಿಲ್ಲವೆಂದು ಈಗ ಸುಮ್ಮನೆ ಮಲಗಿ ಒಂಬತ್ತು ಗಂಟೆಗೆ ಬಾ, ಅಲ್ಲಿಯವರೆಗೆ ಕಾಯಿ. ಹತ್ತು ನಿಮಿಷವೂ ಕಳೆದಿಲ್ಲ, ನಸುರುದ್ದೀನ್ ಪುನಃ ಫೋನ್ ಮಾಡಿದ, ಇದು ಬಲು ಅರ್ಜೆಂಟ್ ವಿಚಾರ, ಹೇಳು ಬಾರ್ ಎಷ್ಟು ಹೊತ್ತಿಗೆ ತೆಗೆಯಲಾಗುತ್ತದೆ. 
 
ಈಗ ಈತನಿಗೆ ಬಲು ಕೋಪ ಬಂದಿತು. ಈತ ಹೇಳಿದ, ನೀನೇನು ಮಾಡುತ್ತಿರುವೆ ಎಂದು ತಿಳಿದಿರುವೆ? ನಾನು ಆಗಲೇ ಹೇಳಿದ್ದು ನಿನಗರ್ಥವಾಗಲಿಲ್ಲವೇ? ಒಂಬತ್ತು ಗಂಟೆಗೆ ಮುಂಚೆ ಬಾಗಿಲು ತೆಗೆಯುವುದಿಲ್ಲ. ನೀನು ಹೀಗೆ ಮತ್ತೆ ಮತ್ತೆ ಫೋನ್ ಮಾಡುತ್ತಲೇ ಇರಬೇಡ. 
 
ಆದರೆ ನಸುರುದ್ದೀನ್ ಪುನಃ ಹತ್ತು ನಿಮಿಷ ಬಿಟ್ಟು ಫೋನ್ ಮಾಡಿದ, ಆಗ ಈ ಬಾರ್ ಅಟೆಂಡರ್ ಹೇಳಿದ, ನಿನಗೇನು ಹುಚ್ಚೇ? ಒಂಬತ್ತು ಗಂಟೆಯವರಿಗೆ ಕಾಯಲೇಬೇಕು. ನಸುರುದ್ದೀನ್ ಹೇಳಿದ, ನಿನಗೆ ತಿಳಿಯುತ್ತಿಲ್ಲ, ನಾನು ಬಾರ್ ಸಲೂನಿನ ಒಳಗೇ ಬಂದಿಯಾಗಿರುವೆ, ನಾನು ಹೊರಗೆ ಹೋಗಬೇಕು!
 

Share this Story:

Follow Webdunia kannada