Select Your Language

Notifications

webdunia
webdunia
webdunia
webdunia

ವ್ಯಾಸಲೀನ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

ವ್ಯಾಸಲೀನ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?
ಬೆಂಗಳೂರು , ಬುಧವಾರ, 10 ಅಕ್ಟೋಬರ್ 2018 (14:05 IST)
ಚಳಿಗಾಲದಲ್ಲಿ ಹೇರಳವಾಗಿ ಬಳಕೆಯಾಗುವ ವಸ್ತು ಎಂದರೆ ವ್ಯಾಸಲೀನ್. ಅದರಿಂದ ತ್ವಚೆಗೆ ಮಾತ್ರ ಪ್ರಯೋಜನವಿದೆ ಎಂದು ತಿಳಿದವರು ಹಲವಾರು ಮಂದಿ. ಆದರೆ ತ್ವಚೆಗಷ್ಟೇ ಅಲ್ಲದೇ ಬೇರೆ ಎಲ್ಲಾ ರೀತಿಯಲ್ಲಿ ವ್ಯಾಸಲೀನ್ ಹೇಗೆ ಬಳಕೆಯಾಗುತ್ತೆ ಎಂದು ನಾವು ತಿಳಿಸಿಕೊಡ್ತೀವಿ.. ಮುಂದೆ ಓದಿ. 
* ಮೇಕಪ್ ತೆಗೆಯುವುದಕ್ಕೆ : ಈಗಿನ ವಿದ್ಯಾಮಾನದಲ್ಲಿ ಕಾಲೇಜಿಗೆ ಹೋಗುವ ಹುಡುಗಿಯರು ಅಷ್ಟೇ ಅಲ್ಲದೇ 40 ದಾಟಿದವರೂ ಸಹ ತಮ್ಮ ವಯಸ್ಸನ್ನು ಮರೆಮಾಚಲು ಮೇಕಪ್‌ನ ಮೊರೆಹೋಗುತ್ತಾರೆ. ಆದರೆ ಮೇಕಪ್ ಅನ್ನು ಪೂರ್ತಿಯಾಗಿ ತೆಗೆಯುವಾಗ ಯಾವುದೇ ಆಯಿಲ್‌ನ ಅವಶ್ಯಕತೆ ಇಲ್ಲದೇ ವ್ಯಾಸಲೀನ್ ಅನ್ನು ಹತ್ತಿಯಲ್ಲಿ ತೆಗೆದುಕೊಂಡು ಗಾಢವಾದ ಲಿಪ್‌ಸ್ಟಿಕ್, ಕಾಜಲ್, ಫೌಂಡೇಶನ್ ಕ್ರೀಮ್‌ಗಳನ್ನು ಸುಲಭವಾಗಿ ತೆಗೆಯಬಹುದು. ಇದರಿಂದ ಚರ್ಮವೂ ಸಹ ಹೊಳೆಯುತ್ತದೆ.
 
* ಸುಗಂಧ ದ್ರವ್ಯದ ಸುವಾಸನೆಯು ಹೆಚ್ಚು ಹೊತ್ತು ಇರುವಂತೆ ಮಾಡುತ್ತದೆ : ಕೇವಲ ಶ್ರೀಮಂತರ ಬಳಿ ಕಾಣಬಹುದಾಗಿದ್ದ ಸುಗಂಧ ದ್ರವ್ಯಗಳು ಇಂದಿನ ದಿನಮಾನದಲ್ಲಿ ಎಲ್ಲರ ಕೈಗೆಟಕುವಂತಾಗಿದೆ. ಅದರೆ ಮಾರುಕಟ್ಟೆಯಲ್ಲಿ ಎಷ್ಟೇ ಲಾಂಗ್ ಲಾಸ್ಟಿಂಗ್ ಸುಗಂಧ ದ್ರವ್ಯಗಳಿದ್ದರೂ ಅವುಗಳ ಆಯಸ್ಸು ಕಡಿಮೆ ಅವಧಿಯವರೆಗೆ ಮಾತ್ರ ಇರುತ್ತದೆ. ಆದರೆ ಸುಗಂಧ ದ್ರವ್ಯವನ್ನು ಬಳಸುವ ಮೊದಲು ಅಂದರೆ ಕಂಕುಳಲಲ್ಲಿ, ಕಿವಿಯ ಹಿಂಭಾಗ ವ್ಯಾಸಲೀನ್ ಅನ್ನು ಸವರಿ ನಂತರ ಅದನ್ನು ಬಳಸುವುದರಿಂದ ಸುಗಂಧ ದ್ರವ್ಯಗಳ ಪರಿಮಳವು ಬಹಳ ಹೊತ್ತಿನ ತನಕ ಇರುತ್ತದೆ.
 
* ಕಣ್ಣಿನ ಕೆಳಗೆ ಸಾಮಾನ್ಯವಾಗಿ ಆಗುವ ಡಾರ್ಕ್ ಸರ್ಕಲ್ ಅನ್ನು ಮಾಯವಾಗಿಸಲು ಉಪಯುಕ್ತ : ಕುರುಡು ಕಾಂಚಾಣದ ಹಿಂದೆ ನಾಗಾಲೋಟದಿಂದ ಓಡುತ್ತಿರುವ ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತಿದ್ದಾನೆ. ಸರಿಯಾದ ಊಟ ನಿದ್ದೆಗಳಿಲ್ಲದೇ ನಾನಾ ರೋಗಕ್ಕೆ ತುತ್ತಾಗಿದ್ದಾನೆ. ಆದರೆ ಮುಖದಲ್ಲಿ ಎದ್ದು ಕಾಣುವಂತೆ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳಾಗಿದ್ದರೆ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ವ್ಯಾಸಲೀನ್ ಅನ್ನು ಹಚ್ಚಿಕೊಂಡು ಮಲಗುವುದರಿಂದ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.
 
* ನುಣುಪಾದ ಪಾದಕ್ಕೆ : ಸಾಮಾನ್ಯವಾಗಿ ವ್ಯಾಸಲೀನ್ ಚಳಿಗಾಲದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಸ್ಥಾನದಲ್ಲಿದೆ. ಚಳಿಗಾಲದಲ್ಲಿ ಕಾಲುಗಳು ಬಿರುಕು ಬಿಡುವುದು, ಕೈ ತ್ವಚೆಗಳು ಒಡೆಯುವುದು ಇಂತಹ ಸಮಸ್ಯೆಗಳಿಗೆ ವ್ಯಾಸಲೀನ್ ಅನ್ನು ಬಳಸುವುದರಿಂದ ಇಂತಹ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.
 
* ನೈಲ್‌ಪಾಲೀಶ್ ಮುಚ್ಚಳ ಗಟ್ಟಿಯಾಗಿದ್ದರೆ : ಮೇಕಪ್ ಸಾಮಗ್ರಿಗಳಲ್ಲಿ ಚಿಕ್ಕವರಿಂದ ವೃದ್ಧರವರೆಗೂ ಆಕರ್ಷಿಸುವುದು ನೈಲ್‌ಪಾಲೀಶ್. ಇದನ್ನು ಬಹಳ ದಿನ ಬಳಸದೇ ಇದ್ದರೆ ಅದರ ಮುಚ್ಚಳ ಗಟ್ಟಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ನೈಲ್‌ಪಾಲೀಶ್ ಮುಚ್ಚಳಕ್ಕೆ ವ್ಯಾಸಲೀನ್ ಅನ್ನು ಸವರುವುದರಿಂದ ಆ ಸಮಸ್ಯೆಯು ಪರಿಹಾರವಾಗುತ್ತದೆ.
 
* ಬ್ಯಾಗ್ ಅಥವಾ ಶೂಗೆ ಮಾಲೀಶ್ ಮಾಡಲು : ಬ್ಯಾಗ್ ಅಥವಾ ಶೂ ಬಹಳ ದಿನ ಬಳಸದೇ ಇದ್ದಾಗ ಅದು ತನ್ನ ಹೊಳಪನ್ನು ಕಳೆದುಕೊಂಡಿರುತ್ತದೆ. ಅದು ಮತ್ತೆ ಹೊಳಪನ್ನು ಹೊಂದಬೇಕಾದರೆ ಅದರ ಮೇಲೆ ವ್ಯಾಸಲೀನ್‌ನಿಂದ ಮಾಲೀಶ್ ಮಾಡುವುದರಿಂದ ಬ್ಯಾಗ್ ಮತ್ತು ಶೂ ಮೊದಲಿನಂತೆಯೇ ಹೊಳೆಯುವಂತಾಗುತ್ತದೆ.
 
* ಒಡಕು ತುಟಿಗೆ : ಚಳಿಗಾಲವಲ್ಲದೇ ಕೆಲವೊಮ್ಮೆ ದೇಹದ ಉಷ್ಣತೆ ಜಾಸ್ತಿಯಾದರೂ ಕೆಲವರಿಗೆ ತುಟಿ ಒಡೆಯುತ್ತದೆ. ಅಂತಹ ಸಂದರ್ಭದಲ್ಲಿ ವ್ಯಾಸಲೀನ್ ಅನ್ನು ಹಚ್ಚುವುದರಿಂದ ಅದು ತುಟಿ ಡ್ರೈ ಆಗುವುದನ್ನು ತಪ್ಪಿಸಿ ಚರ್ಮ ಒಡೆಯುವುದನ್ನು ತಪ್ಪಿಸುತ್ತದೆ. ಮತ್ತು ಇನ್ನೂ ಚಂದಗಾಣುವಂತೆ ಮಾಡುತ್ತದೆ.
 
* ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದ್ದರೆ ವ್ಯಾಸಲೀನ್ ಬಳಸುವುದರಿಂದ ಚರ್ಮವು ಕಪ್ಪಾಗುವುದು ಕಡಿಮೆಯಾಗುತ್ತದೆ.
 
* ಕೈ ಹಾಗೂ ಬೆರಳುಗಳಿಗೆ ವ್ಯಾಸಲೀನ್ ಅನ್ನು ಮಸಾಜ್ ಮಾಡುವುದರಿಂದ ಉಗುರಿನ ಹೊಳಪು ಜಾಸ್ತಿಯಾಗುತ್ತದೆ.
 
ಇಂದಿನ ವಿದ್ಯಮಾನದಲ್ಲಿ ಹೆಂಗಳೆಯರಿಗೆ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕಷ್ಟದ ಮಾತೇ ಸರಿ. ವಾತಾವರಣದ ಧೂಳು, ವಾಹನದ ಹೊಗೆ, ಕಲುಷಿತ ಗಾಳಿ, ಹೆಚ್ಚು ತೈಲಯುಕ್ತವಾದ ಆಹಾರದ ಬಳಕೆಯಿಂದಾಗಿ ಮುಖದ ಮೇಲೆ ಮೊಡವೆಗಳಾಗುವುದು, ಇನ್ನಿತರವಾದ ತ್ವಚೆಯ ಸಮಸ್ಯೆಗಳು ಸಹಜ. ಅವು ಮೊದಲು ಸಣ್ಣ ವಿಷಯದಂತೆ ತೋರಿದರೂ ಅವುಗಳಿಂದಾಗುವ ಕಲೆಗಳು ಮುಖದ ಅಂದವನ್ನು ಕಡಿಮೆಗೊಳಿಸುತ್ತದೆ. ಆಗ ರಾಸಾಯನಿಕಯುಕ್ತವಾದ ಕ್ರೀಮ್‌ಗಳನ್ನು ಬಳಸುವುದಕ್ಕಿಂತ ನೈಸರ್ಗಿಕವಾದ ಉತ್ಪನ್ನಗಳನ್ನು ಬಳಸುವುದು ಉತ್ತಮ. ಅದರೆ ಅದಕ್ಕೂ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅವರು ಸೂಚನೆಗಳನ್ನು ಪಾಲಿಸುವುದು ಉತ್ತಮ. ಏಕೆಂದರೆ ನೈಸರ್ಗಿಕವಾಗಿದ್ದರೂ ಕೆಲವೊಂದು ಪದಾರ್ಥಗಳು ಅಲರ್ಜಿಯನ್ನು ಉಂಟುಮಾಡುತ್ತವೆ. ಅದರಲ್ಲಿಯೂ ಮುಖದ ತ್ವಚೆಯು ಸೂಕ್ಷ್ಮವಾಗಿರುವುದರಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಮುಂದುವರೆಯುವುದು ಉತ್ತಮ. 

Share this Story:

Follow Webdunia kannada

ಮುಂದಿನ ಸುದ್ದಿ

ಅನಾನಸ್ ಕೊಬ್ಬರಿ ಮಿಠಾಯಿ