Select Your Language

Notifications

webdunia
webdunia
webdunia
webdunia

ಅಲರ್ಜಿ ಬಗ್ಗೆ ನಿಮಗೆಷ್ಟು ತಿಳಿದಿದೆ?

ಅಲರ್ಜಿ ಬಗ್ಗೆ ನಿಮಗೆಷ್ಟು ತಿಳಿದಿದೆ?
ಬೆಂಗಳೂರು , ಬುಧವಾರ, 29 ಆಗಸ್ಟ್ 2018 (14:17 IST)
ಭೂ ಮಂಡಲದಲ್ಲಿ ಮನುಷ್ಯ ಜೀವಿಯು ಪ್ರತಿದಿನ ಒಂದಲ್ಲಾ ಒಂದು ರೋಗಕ್ಕೆ ತುತ್ತಾಗುತ್ತಲೇ ಇದ್ದಾನೆ. ಕೆಲವೊಂದನ್ನು ಗುಣಪಡಿಸಲು ಸಾಧ್ಯವಾದರೆ ಇನ್ನು ಕೆಲವಕ್ಕೆ ಈಗಲೂ ಚಿಕಿತ್ಸೆಯನ್ನು ಕಂಡುಹಿಡಿಯುತ್ತಲೇ ಇದ್ದಾರೆ. ವೈದ್ಯಕೀಯ ಶಾಸ್ತ್ರದಲ್ಲಿ ಗಣನೀಯ ಬೆಳವಣಿಗೆಗಳು ಆಗಿದ್ದರೂ ದಿನಕ್ಕೊಂದು ರೋಗದ ಲಕ್ಷಣಗಳು ತಲೆದೋರುತ್ತಲೇ ಇವೆ.

ಅಂತಹ ರೋಗಗಳ ಸಾಲಿಗೆ ಈ ಅಲರ್ಜಿಯೂ ಸೇರುತ್ತದೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಒಂದಲ್ಲಾ ಒಂದು ಅಲರ್ಜಿಯಿಂದ ಬಳಲುತ್ತಿರುತ್ತಾರೆ.  ವ್ಯಕ್ತಿಯೊಬ್ಬನ ಶರೀರವು ಹಾನಿಕಾರಕವಾಗಿರುವ ಬಾಹ್ಯ ಪದಾರ್ಥಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಂಡಾಗ ಅಂದರೆ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಸಾಮಾನ್ಯವಾಗಿ ಅಲರ್ಜಿ ಉಂಟಾಗುತ್ತದೆ. ಇದು ಕೆಲವೊಂದು ಬಾರಿ ವಸ್ತುವಿನಿಂದಲೂ, ವಾತಾವರಣದಲ್ಲಾಗುವ ಬದಲಾವಣೆಯಿಂದಲೂ ಹೀಗೆ ಹಲವಾರು ರೀತಿಯ ಕಾರಣದಿಂದ ಬರುತ್ತದೆ. ಮನುಷ್ಯನ ದೇಹವು ಯಾವುದಾದರೂ ಒಂದು ಅಂಶಕ್ಕೆ ಅತಿಯಾಗಿ ಪ್ರತಿಕ್ರಿಯೆ ನಡೆಸುವ ಕ್ರಿಯೆಗೆ ಅಲರ್ಜಿ ಎಂದು ಕರೆಯಬಹುದು. 
 
** ಯಾವ್ಯಾವ ರೀತಿಯ ಅಲರ್ಜಿಗಳಿವೆ?
 
1. ಋುತುಮಾನದ ಅಲರ್ಜಿ : ಬಹಳ ಜನರು ಮಳೆಗಾಲದಲ್ಲಿ ಮಾತ್ರ ನೆಗಡಿ ಅಲ್ಲದಿದ್ದರೂ ಮತ್ತು ಇನ್ನು ಕೆಲವರು ಮೋಡದ ವಾತಾವರಣವಿದ್ದಾಗ  ತುಂಬಾ ಸೀನುವುದನ್ನು ಕಾಣುತ್ತೇವೆ. ಈ ತರಹದ ಅಲರ್ಜಿಗಳು ಋುತುಮಾನದ ಅವಧಿಯಲ್ಲಿ ಮಾತ್ರ ಉಂಟಾಗುತ್ತದೆ. ಋುತುಮಾನದಲ್ಲಾಗುವ ಬದಲಾವಣೆಗಳು ಮತ್ತು ಜಾಗತಿಕ ತಾಪಮಾನ ಏರಿಕೆಯು ಈ ಅಲರ್ಜಿಗಳಿಗೆ ಕಾರಣವಾಗಿದೆ. ಈ ಬದಲಾವಣೆಗಳು ನಮ್ಮಲ್ಲಿ ಫ್ಲೂ ತರಹದ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಗಳನ್ನು ಉಂಟುಮಾಡಬಹುದು.
 
ಪರಿಹಾರಗಳು : ಈ ಅಲರ್ಜಿಯಿಂದ ಬಳಲುತ್ತಿರುವ ಜನರು ಋುತುಮಾನವು ಆರಂಭವಾಗುವ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು. ವೈದ್ಯರನ್ನು ಸಂಪರ್ಕಿಸಿ ಸೂಕ್ತವಾದ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ.  
webdunia
2. ಶೀತದ ಅಲರ್ಜಿ : ಶೀತ ಪೃಕೃತಿಯನ್ನು ಹೊಂದಿರುವ ಜನರಲ್ಲಿ ಈ ಅಲರ್ಜಿಯ ಲಕ್ಷಣಗಳನ್ನು ನಾವು ಕಾಣಬಹುದು. ಈ ತರಹದ ಜನರಲ್ಲಿ ವರ್ಷದ 365 ದಿನವೂ ಮೂಗು ಸೋರುವುದು, ಮೂಗು ಬ್ಲಾಕ್ ಅಗುವುದು, ಗಂಟಲು ನೋವಾಗುವುದು, ಕೆಮ್ಮು ಅಥವಾ ದಮ್ಮು ಆಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಅಲರ್ಜಿಯು ಮುಂದುವರೆದರೆ ನ್ಯೂಮೋನಿಯಾದಂತಹ ರೋಗಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಬರುತ್ತವೆ.
ಪರಿಹಾರಗಳು : ಈ ಅಲರ್ಜಿಯಿಂದ ಬಳಲುತ್ತಿರುವವರು ಆದಷ್ಟು ಬಿಸಿ ಬಿಸಿಯಾದ ಪದಾರ್ಥಗಳನ್ನು ಸೇವಿಸುವುದು ಉತ್ತಮ. ನೆಗಡಿ ಆಗದೇ ಇರುವ ಹಾಗೆ ನೋಡಿಕೊಂಡರೆ ಈ ಅಲರ್ಜಿಯಿಂದ ಮುಕ್ತಿ ಕಾಣಬಹುದು.
 
3. ಚರ್ಮದ ಅಲರ್ಜಿ : ಈ ಅಲರ್ಜಿಯ ಬಹಳ ಜನರಲ್ಲಿ ಕಂಡುಬರುವ ಅಲರ್ಜಿಯಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾದಾಗ ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳಾಗುವುದು, ತುರಿಕೆ ಉಂಟಾಗುವುದು, ತುರಿಕೆಯಿಂದ ಅಲರ್ಜಿಯು ಇನ್ನೂ ಉಲ್ಬಣಗೊಳ್ಳುವುದು ಈ ಅಲರ್ಜಿಯ ಲಕ್ಷಣವಾಗಿದೆ. ಈ ಅಲರ್ಜಿಯು ಸಾಂಕ್ರಾಮಿಕವಾಗಿಯೂ ಪರಿಣಮಿಸಬಹುದು. ಮತ್ತು ದೇಹದ ಎಲ್ಲಾ ಭಾಗಗಳಿಗೂ ಪಸರಿಸುವ ಸಾಧ್ಯತೆಯೂ ಇರುತ್ತದೆ.
 
ಪರಿಹಾರಗಳು : ಈ ಅಲರ್ಜಿಯಿಂದ ಬಳಲುತ್ತಿರುವವರು ಸ್ವಚ್ಛತೆಗೆ ಮಹತ್ವವನ್ನು ಕೊಡುವುದು ಒಳ್ಳೆಯದು. ಬೆವರಿದ ಬಟ್ಟೆಗಳಿಂದ ಮುಖವನ್ನು ಒರೆಸಿಕೊಳ್ಳದೇ ಇರುವುದು, ಬೇರೆಯವರ ಬಟ್ಟೆಗಳನ್ನು ಬಳಸದೇ ಇರುವುದು ಉತ್ತಮ. ಶುಭ್ರವಾದ ಬಟ್ಟೆಗಳನ್ನು ಧರಿಸುವುದರಿಂದ ಈ ಅಲರ್ಜಿಯನ್ನು ಪರಿಹರಿಸಿಕೊಳ್ಳಬಹುದು.
webdunia
4. ಧೂಳಿನ ಅಲರ್ಜಿ : ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಹವಾಮಾನ ವೈಪರಿತ್ಯದಿಂದಾಗಿ ಜನರು ಈ ಅಲರ್ಜಿಗೆ ತುತ್ತಾಗುತ್ತಿದ್ದಾರೆ. ಅದಲ್ಲದೇ ಮನೆಗಳಲ್ಲಿರುವ ಪೀಠೋಪಕರಣಗಳು ಮತ್ತು ಹಾಸಿಗೆಗಳಲ್ಲಿನ ಧೂಳುಗಳು ಶರೀರವನ್ನು ಪ್ರವೇಶಿಸುವುದರಿಂದ ಈ ಅಲರ್ಜಿಯು ಉಂಟಾಗುತ್ತದೆ. ಈ ಅಲರ್ಜಿ ಇರುವವರು ಪದೇ ಪದೇ ಸೀನುತ್ತಿರುತ್ತಾರೆ, ಮೂಗು ಸೋರುವಿಕೆ, ತಲೆನೋವು ಕೂಡಾ ಇದರ ಲಕ್ಷಣವಾಗಿದೆ. ಈ ಅಲರ್ಜಿಯು ತೀವ್ರವಾದಾಗ ಅಸ್ತಮಾ ಕೂಡೂ ಬರಬಹುದು. 
 
ಪರಿಹಾರಗಳು : ಈ ಅಲರ್ಜಿಯಿಂದ ಬಳಲುತ್ತಿರುವವರು ಸ್ವಚ್ಛತೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ದಾರಿಯಲ್ಲಿ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಆದಷ್ಟು ಧೂಳಿನಿಂದ ಮೂಗು, ಕಣ್ಣಿನಂತಹ ಸೂಕ್ಷ್ಮ ಭಾಗಗಳನ್ನು ಧೂಳಿನಿಂದ ರಕ್ಷಿಸಿಕೊಳ್ಳಬೇಕು. 
 
5. ಪರಾಗದ ಅಲರ್ಜಿ : ಈ ಅಲರ್ಜಿಯು ತುಂಬಾ ವಿರಳವಾಗಿದೆ. ಈ ಅಲರ್ಜಿಯು ಕೆಲವು ಸಸ್ಯಗಳ ಪರಾಗದಿಂದ ಉಂಟಾಗುತ್ತದೆ. ಕೆಲವು ಸಸ್ಯಗಳ ಪರಾಗಗಳು ಗಾಳಿಯಲ್ಲಿ ಸುಲಭವಾಗಿ ಬೆರೆತು ಬಿಡುತ್ತವೆ. ಈ ಗಾಳಿಯನ್ನು ಉಸಿರಾಡಿಸಿದಾಗ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ. 
 
ಪರಿಹಾರಗಳು : ಇಂತಹ ಸಸ್ಯಗಳನ್ನು ಮನೆಯ ಆಸುಪಾಸಿನಲ್ಲಿ ಇರದಂತೆ ನೋಡಿಕೊಳ್ಳಬೇಕು. 
webdunia
6. ಔಷಧಿಗಳಿಂದ ಅಲರ್ಜಿ : ಜೀವ ಉಳಿಸುವ ಮಾತ್ರೆಗಳಿಂದಲೇ ಅಲರ್ಜಿಯೇ ಎಂದು ಹುಬ್ಬೇರಿಸಬೇಡಿ. ಅವುಗಳಿಂದಲೂ ಅಲರ್ಜಿಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಮಾತ್ರೆಗಳಲ್ಲಿರುವ ಯಾವುದೋ ಒಂದು ರಾಸಾಯನಿಕ ಅಂಶಗಳು ದೇಹಕ್ಕೆ ಒಗ್ಗದೇ ಹೋದಾಗ ಮೈ ಮೇಲೆ ಗುಳ್ಳೆಗಳಾಗುವ ಸಂಭವವಿರುತ್ತದೆ. ಮತ್ತು ಕೆಲವೊಂದು ಅಧಿಕ ಡೋಸೇಜ್ ಇರುವ ಮಾತ್ರೆಗಳನ್ನು ಸೇವಿಸಿದಾಗಲೂ ಶರೀರದಲ್ಲಿ ಚುಚ್ಚಿದ ಅನುಭವ, ಜ್ವರ ಇಂತಹ ಲಕ್ಷಣಗಳು ಕಂಡುಬರುತ್ತದೆ.
 
ಪರಿಹಾರಗಳು : ಯಾವುದೇ ರೋಗ ಬಂದಾಗ ನಮಗೆ ನಾವೇ ವೈದ್ಯರಾಗುವ ಬದಲು ಮಾತ್ರೆ ತೆಗೆದುಕೊಳ್ಳುವ ಮುನ್ನ ವೈದ್ಯರ ಮಾರ್ಗದರ್ಶನದ ಮೇರೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಮಾತ್ರೆಗಳು ಬೇಡದೇ ಹೋದರೆ ಇಂಜೆಕ್ಷನ್ ಅಥವಾ ಟಾನಿಕ್‌ಗಳನ್ನು ಸೇವಿಸುವುದು ಒಳ್ಳೆಯದು.
 
7. ಆಹಾರದ ಅಲರ್ಜಿ : ಆಹಾರದಿಂದಲೂ ಅಲರ್ಜಿಯೇ ಎಂದು ಆಶ್ಚರ್ಯಚಕಿತರಾಗಬೇಡಿ. ಕೆಲವರಿಗೆ ಕೆಲವು ತರಕಾರಿಗಳನ್ನು ಸೇವಿಸಿದಾಗ ಮೈ ಮೇಲೆ ಗುಳ್ಳೆಗಳಾಗುವುದು, ತುರಿಕೆ ಉಂಟಾಗುತ್ತದೆ. ಪ್ರತಿಯೊಬ್ಬರಿಗೂ ಒಂದೇ ತರಹದ ಅಲರ್ಜಿ ಇರಬೇಕು ಎಂದೇನಿಲ್ಲ. ಕೆಲವು ವ್ಯಕ್ತಿಗಳಿಗೆ ಮೊಟ್ಟೆ, ಹಾಲು, ಬಟಾಣಿ, ಕಿವಿ ಹಣ್ಣು, ನೆಲಗಡಲೆ ಇನ್ನೂ ಕೆಲವರಿಗೆ ಗೋಧಿ, ಆಲೂಗಡ್ಡೆ. ಬದನೆಕಾಯಿ, ಚಿಕನ್ ಅಥವಾ ಮಟನ್,  ಸೋಯಾದಂತಹ ಆಹಾರ ಪದಾರ್ಥಗಳು ಮತ್ತು ಕೆಲವರಿಗೆ ನುಗ್ಗೆಕಾಯಿಯನ್ನು ಸೇವಿಸಿದರೂ  ಅಲರ್ಜಿ ಆಗುತ್ತದೆ. 
 
ಪರಿಹಾರಗಳು : ಅವರವರ ಆರೋಗ್ಯ ಪ್ರಕೃತಿಯ ಬಗ್ಗೆ ತಿಳಿದುಕೊಂಡು ಅಲರ್ಜಿ ಆಗುವ ಆಹಾರ ಪದಾರ್ಥಗಳನ್ನು ವರ್ಜಿಸುವುದು ಉತ್ತಮ.
8. ಸಾಕುಪ್ರಾಣಿಗಳಿಂದ ಅಲರ್ಜಿ : ಈ ಅಲರ್ಜಿಗೆ ಇತ್ತೀಚೆಗೆ ಬಹಳಷ್ಟು ಜನರು ತುತ್ತಾಗುತ್ತಿದ್ದಾರೆ. ಸಾಕುಪ್ರಾಣಿಗಳ ಜೊಲ್ಲು, ಮೂತ್ರ, ಅವುಗಳ ಚರ್ಮದಲ್ಲಿ ಆಗುವ ಸಣ್ಣ ಸಣ್ಣ ಕ್ರಿಮಿ ಕೀಟಗಳಿಂದ ಈ ಅಲರ್ಜಿಗಳು ಆಗುತ್ತವೆ. 
 
ಪರಿಹಾರಗಳು : ಸಾಕುಪ್ರಾಣಿಗಳ ಸ್ವಚ್ಛತೆಯ ಬಗ್ಗೆ ಆದಷ್ಟು ಗಮನ ಹರಿಸಿದರೆ ಈ ಅಲರ್ಜಿಯಿಂದ ಪಾರಾಗಬಹುದು. ಮತ್ತು ಸಾಕುಪ್ರಾಣಿಗಳನ್ನು ಮುಟ್ಟಿದಾಗ ತಪ್ಪದೇ ಕೈ ಕಾಲುಗಳನ್ನು ತೊಳೆದುಕೊಳ್ಳುವ ಅಭ್ಯಾಸಗಳನ್ನು ಮಾಡಿಕೊಂಡರೆ ಈ ಅಲರ್ಜಿಯು ಬರದಂತೆ ತಡೆಯಬಹುದು. 
 
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಅಲರ್ಜಿಯು ಇದ್ದೇ ಇರುತ್ತದೆ. ಆದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಅವರ ದೊಡ್ಡ ರೋಗವಾಗಿ ಉಲ್ಬಣಿಸಿದಾಗಲೇ ಅದನ್ನು ಗುಣಪಡಿಸಲು ಹೆಣಗಾಡುತ್ತೇವೆ. ಅದಕ್ಕೂ ಮುಂಚೆಯೇ ರೋಗದ ಸಣ್ಣ ಲಕ್ಷಣಗಳು ಕಂಡಾಗಲೇ ನಾವು ವೈದ್ಯರ ಬಳಿ ಹೋಗುವುದು ಉತ್ತಮ. ಕೆಲವು ರೋಗಗಳಿಗೆ ಪ್ರಥಮ ಚಿಕಿತ್ಸೆಗಳಿದ್ದರೂ ನಂತರ ನಾವು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಮುಂದುವರಿಯುವುದು ಉತ್ತಮ. ಅಲರ್ಜಿಗಳನ್ನು ನಿರ್ಲಕ್ಷಿಸಿದರೆ ಅವು ಮುಂದೆ ದೊಡ್ಡ ರೋಗವಾಗಿ ಪರಿಣಮಿಸುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಿಕೊಂಡರೆ ಈ ಎಲ್ಲಾ ಅಲರ್ಜಿಗಳನ್ನು ನಾವು ಬರದಂತೆ ನೋಡಿಕೊಳ್ಳಬಹುದು. ಉತ್ತಮ ತರಕಾರಿ, ಹಣ್ಮುಗಳನ್ನು ಸೇವಿಸಿ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳೋಣ..

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಪಲ್ ರೆಸಿಪಿ ಸೋಯಾ ಚಿಕನ್ ..!!