Select Your Language

Notifications

webdunia
webdunia
webdunia
webdunia

ಮೈಸೂರು ದಸರಾ ಜಂಬೂ ಸವಾರಿಯ ರೂವಾರಿಗಳು

ಮೈಸೂರು ದಸರಾ ಜಂಬೂ ಸವಾರಿಯ ರೂವಾರಿಗಳು
(ಚಿತ್ರ, ಲೇಖನ :ಬಿ.ಎಂ.ಲವಕುಮಾರ್, ಮೈಸೂರು )
WD

ಆನೆಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಜೊತೆಗೆ ಜಂಬೂ ಸವಾರಿಯ ರೂವಾರಿಗಳೂ ಹೌದು. ಆನೆಗಳಿಲ್ಲದ ದಸರಾವನ್ನು ಊಹಿಸಲೂ ಸಾಧ್ಯವಿಲ್ಲ. ವಿವಿಧ ಆನೆ ಶಿಬಿರಗಳಿಂದ ಎರಡು ತಂಡವಾಗಿ ಆಗಮಿಸುವ ಗಜಪಡೆ, ಕಾಡಿನಿಂದ ನಗರ ಪ್ರವೇಶಿಸುತ್ತಿದ್ದಂತೆಯೇ ಮೈಸೂರಿಗೆ ದಸರಾ ಕಳೆ ಬಂದು ಬಿಡುತ್ತದೆ.

ದಸರಾಕ್ಕೆ ಸುಮಾರು ಒಂದೂವರೆ ತಿಂಗಳಿರುವಾಗಲೇ ನಾಗರಹೊಳೆಯ ವೀರನಹೊಸಹಳ್ಳಿಯಿಂದ ಬಲರಾಮ ನೇತೃತ್ವದ ಆರು ಆನೆಗಳ ಮೊದಲ ತಂಡದ ಗಜಪಯಣ ಮೈಸೂರಿಗೆ ಆಗಮಿಸಿದರೆ, ಆ ನಂತರ ದಸರಾಕ್ಕೆ ಕೆಲವೇ ದಿನಗಳ ಅಂತರದಲ್ಲಿ ಉಳಿದ ಆರು ಆನೆಗಳ ಎರಡನೆಯ ತಂಡ ಬರುತ್ತದೆ. ಈ ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ದಿನನಿತ್ಯ ವಿವಿಧ ಬಗೆಯ ಭೂರೀ ಭೋಜನ. ಅದರಲ್ಲೂ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಬಲರಾಮನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ, ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು ಮೊದಲಾದ ಸೈಡ್ ಐಟಂಗಳೂ ಇರುತ್ತವೆ. ಇದಲ್ಲದೆ, ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ್ಗೆ ನೀಡಲಾಗುತ್ತದೆ. ದಿನಕ್ಕೆರಡು ಬಾರಿ ಅರಮನೆ ಆವರಣದ ತೊಟ್ಟಿಯಲ್ಲಿ ಮಜ್ಜನದ ವೈಭೋಗ.

ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಸಿದ್ಧವಾಗಿರಲು ಬಲರಾಮನಿಗೆ ಸುಮಾರು 750 ಕೆ.ಜಿ. ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆಯನ್ನು ಕಟ್ಟಿ ದಿನಕ್ಕೊಮ್ಮೆ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಬನ್ನಿ ಮಂಟಪದವರೆಗೆ ಕಡ್ಡಾಯ ಮಾರ್ಚ್‌ಫಾಸ್ಟ್ ನಡೆಯುತ್ತದೆ. ಈ ಗಜಪಡೆಯ ಉಸ್ತುವಾರಿಗೆ ಮಾವುತರು, ಕಾವಡಿಗರು ಇರುವುದರೊಂದಿಗೆ ಪಶುವೈದ್ಯಾಧಿಕಾರಿಗಳಿಂದ ಆಗಾಗ್ಗೆ ತಪಾಸಣೆಯೂ ನಡೆಯುತ್ತಿರುತ್ತದೆ. ಈ ಗಜಪಡೆಯನ್ನು ಜತನದಿಂದ ನೋಡಿಕೊಳ್ಳಲು ಮಾವುತರ ಕುಟುಂಬಗಳಿಗೆ ಅರಮನೆಯ ಆವರಣದಲ್ಲಿಯೇ ಶೆಡ್ ಹಾಕಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತದೆ.

webdunia
WD
ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ಶ್ರೀರಾಮ, ಅಭಿಮನ್ಯು, ಹರ್ಷ, ವಿಕ್ರಮ್, ಸರಳ, ಕಾಂತಿ ಸೇರಿ ಹನ್ನೆರಡು ಆನೆಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಆಗಮಿಸಿರುವ ಬಲರಾಮ, ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ ಆನೆಗಳಿಗೆ ತಾಲೀಮು ನಡೆಯುತ್ತಿದೆ. ಉಳಿದ ಗಜಗಳ ಎರಡನೆಯ ತಂಡ ಈ ತಿಂಗಳ ಕೊನೆಯ ವಾರದಲ್ಲಿ ಮೈಸೂರು ಪ್ರವೇಶಿಸಲಿದೆ.

ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ದಿನನಿತ್ಯ ಕಠಿಣ ತಾಲೀಮು ನಡೆಸಿ ದಸರಾ ದಿನದಂದು ಕಣ್ಣು ಕುಕ್ಕಿಸುವಂತಹ ವೇಷಭೂಷಣಗಳಿಂದ ಕಂಗೊಳಿಸುತ್ತಾ ಗಾಂಭೀರ್ಯದ ಹೆಜ್ಜೆಯನ್ನಿಡುತ್ತಾ ಮೆರವಣಿಗೆಯಲ್ಲಿ ಸಾಗುವ ಗಜಪಡೆಗಳ ಬಗ್ಗೆ ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಈ ಬಾರಿಯ ಗಜಪಡೆಯ ವಿವರ ಹೀಗಿದೆ.

ಬಲರಾಮ: ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈಗ 52 ವರ್ಷ. ಸೌಮ್ಯ ಸ್ವಭಾವದ ಈತ 2.70 ಮೀಟರ್ ಎತ್ತರ ಇದ್ದಾನೆ. ಹದಿನಾರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

ಅರ್ಜುನ: ಕಳೆದ 9 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನನಿಗೆ ಈಗ 49 ವರ್ಷ. ಈತನ ಎತ್ತರ 2.65 ಮೀಟರ್. 1969ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತ ಅನುಭವವಿದೆ. ಪ್ರಸ್ತುತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಆನೆ ಶಿಬಿರದಿಂದ ಈತ ಬಂದಿದ್ದಾನೆ.

ಮೇರಿ: 54 ವರ್ಷದ ಹೆಣ್ಣಾನೆ ಮೇರಿ 2.11 ಮೀಟರ್ ಎತ್ತರವಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯದ ಸುಂಕದಕಟ್ಟೆ ಆನೆ ಶಿಬಿರದಿಂದ ಬಂದಿದೆ. ಇದನ್ನು 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದುವರೆಗೆ 9 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.

'ಪಟ್ಟದ ಆನೆ' ಗಜೇಂದ್ರ: ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆಶಿಬಿರದಿಂದ ಬಂದಿರುವ ಗಜೇಂದ್ರನಿಗೆ ಈಗ 55 ವರ್ಷ. 2.80 ಮೀಟರ್ ಎತ್ತರವಿದ್ದಾನೆ. ಈತನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಮಹಾರಾಜರ ಅರಮನೆಯ ಪೂಜೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ ಗಜೇಂದ್ರನಿಗೆ 14 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ.

ಕವಿತಾ: ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ 1977ರಲ್ಲಿ ಕವಿತಾಳನ್ನು ಖೆಡ್ಡದಲ್ಲಿ ಸೆರೆಹಿಡಿಯಲಾಗಿದ್ದು, ಈಕೆಗೆ ಈಗ 69 ವರ್ಷ. ಸುಮಾರು 2.35 ಮೀಟರ್ ಎತ್ತರವಿರುವ ಕವಿತಾ, ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದ್ದಾಳೆ. 5 ಬಾರಿ ದಸರಾದಲ್ಲಿ ಪಾಲ್ಗೊಂಡ ಅನುಭವವಿದೆ.

ವರಲಕ್ಷ್ಮಿ: ಈ ಆನೆಯನ್ನು 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆಶಿಬಿರದಿಂದ ಬಂದಿದೆ. 7ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಶ್ರೀರಾಮ: ಇದರ ಅಂದಾಜು ವಯಸ್ಸು 53. ಎತ್ತರ 2.65 ಮೀಟರ್. 1969ರಲ್ಲಿ ಕೊಡಗು ಜಿಲ್ಲೆಯ ತಿತಿಮತಿ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆ ಹಿಡಿಯಲಾಗಿತ್ತು. ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿರುವ ವರಲಕ್ಷ್ಮಿ ಕಳೆದ 13 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಪಟ್ಟದ ಆನೆಯ ಜೊತೆ ಅರಮನೆಯಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸುತ್ತಿದೆ.

ಅಭಿಮನ್ಯು: ಇದರ ವಯಸ್ಸು 44. ಎತ್ತರ 2.66 ಮೀಟರ್. ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಇದನ್ನು 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆಹಿಡಿಯಲಾಗಿತ್ತು. 12 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅಭಿಮನ್ಯು, ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂರ್ಕಲ್ ಆನೆ ಶಿಬಿರದಿಂದ ಬಂದಿದೆ.

ಹರ್ಷ: ಕೊಡಗಿನ ಕುಶಾಲನಗರ ಬಳಿದುಬಾರೆ ಆನೆ ಶಿಬಿರದಿಂದ ಬಂದಿರುವ ಹರ್ಷನ ವಯಸ್ಸು 44. ಎತ್ತರ 2.57 ಮೀಟರ್. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಹನ್ನೊಂದನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ವಿಕ್ರಮ್: ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ವಿಕ್ರಮ್‌ಗೆ 38 ವರ್ಷ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಇದು 9ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

ಸರಳಾ: ಕಳೆದ ಆರು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ 69 ವರ್ಷದ ಸರಳಾಳನ್ನು 1977ರಲ್ಲಿ ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆಶಿಬಿರದಿಂದ ಬಂದಿದೆ.

ಕಾಂತಿ: ಗಜಪಡೆಗಳಿಗೆಲ್ಲಾ ಹಿರಿಯಜ್ಜಿಯಾಗಿರುವ ಕಾಂತಿಗೆ ಈಗ 71 ವರ್ಷ. 2.10 ಮೀಟರ್ ಎತ್ತರವಿರುವ ಇದು ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದೆ. 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು. ಇದುವರೆಗೆ 16 ಬಾರಿ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada