Select Your Language

Notifications

webdunia
webdunia
webdunia
webdunia

ಮ್ಯಾಚ್ ಫಿಕ್ಸಿಂಗ್: ಚೆನ್ನೈನಲ್ಲಿ ಬಿಸಿಸಿಐ ತುರ್ತು ಕಾರ್ಯಕಾರಿ ಸಭೆ

ಮ್ಯಾಚ್ ಫಿಕ್ಸಿಂಗ್: ಚೆನ್ನೈನಲ್ಲಿ ಬಿಸಿಸಿಐ ತುರ್ತು ಕಾರ್ಯಕಾರಿ ಸಭೆ
ನವದೆಹಲಿ , ಭಾನುವಾರ, 16 ನವೆಂಬರ್ 2014 (12:09 IST)
ಕ್ರಿಕೆಟ್‌ ಕಳ್ಳಾಟದ 'ದೊರೆ'ಗಳ ಹೆಸರನ್ನು ಸುಪ್ರೀಂ ಕೋರ್ಟ್‌ ಬಹಿರಂಗಪಡಿಸಿರುವ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನ. 18ರಂದು ಚೆನ್ನೈನಲ್ಲಿ ತುರ್ತು ಕಾರ್ಯಕಾರಿ ಸಭೆ ಕರೆದಿದೆ.
 
ಸುಪ್ರೀಂ ವರದಿ ಪ್ರಕಟಿಸಿದ ಅನಂತರ, ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯನ್ನು ನಾಲ್ಕು ವಾರಗಳ ತನಕ ಮುಂದಕ್ಕೆ ಹಾಕಿತ್ತು. ಈಗ ಮುಂದಿನ ಸಭೆ ನಡೆಸುವ ದಿನಾಂಕವನ್ನು ಗೊತ್ತುಪಡಿಸಲು ಸಭೆ ಕರೆಯಲಾಗಿದೆ ಎನ್ನಲಾಗಿದೆ. ಈ ವೇಳೆ ಸ್ಪಾಟ್‌ ಫಿಕ್ಸಿಂಗ್‌, ಬೆಟ್ಟಿಂಗ್‌ ಪ್ರಕರಣದ ಬಗ್ಗೆಯೂ ಮಾತುಕತೆ ನಡೆಯುವ ಸಾಧ್ಯತೆ ಇದೆ. ಈ ಮೊದಲು ನ. 20ರಂದು ಸಭೆ ನಡೆಸಲು ನಿರ್ಧರಿಸಲಾಗಿತ್ತು.
 
ಶ್ರೀನಿ ಅನುಮಾನ
 
ಈ ಸಭೆಯಲ್ಲಿ ಶ್ರೀನಿವಾಸನ್‌ ಭಾಗವಹಿಸುವಿಕೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಮೊದಲು ಶ್ರೀನಿವಾಸನ್‌ ಸಭೆಯಲ್ಲಿ ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಟಿಎ) ಪ್ರತಿನಿಧಿಸಲಿದ್ದಾರೆ ಎಂದಿತ್ತು. ಈಗ ಸುಪ್ರೀಂ ಕೋರ್ಟ್‌ ಮುದ್ಗಲ್‌ ವರದಿಯಲ್ಲಿ ಮಾವ-ಅಳಿಯನ ಹೆಸರು ಪ್ರಕಟಿಸಿರುವುದರಿಂದ ಶ್ರೀನಿವಾಸನ್‌ ಭಾಗವಹಿಸುವ ಬಗ್ಗೆ ಅನುಮಾನ ಮೂಡಿದೆ.
 
ಕಾನೂನು ತಜ್ಞರೊಂದಿಗೆ ಚರ್ಚೆ
 
ಅಂದು ಬಿಸಿಸಿಐ, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಿದೆ. ಸದ್ಯ ಉಂಟಾಗಿರುವ ತೊಡಕುಗಳಿಂದ ಪಾರಾಗುವ ಬಗ್ಗೆ ಹಾಗೂ ಚುನಾವಣೆಯನ್ನು ವಿವಾದರಹಿತವಾಗಿ ನಡೆಸುವ ಬಗ್ಗೆ ಸಲಹೆ ಕೇಳುವ ಸಾಧ್ಯತೆ ಇದೆ.
 
ಇದೇ ವೇಳೆ ಕಾರ್ಯಕಾರಿ ಸಮಿತಿ ಮುಂದಿನ ಚುನಾವಣಾ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದೆ. ಡಿಸೆಂಬರ್‌ 3ನೇ ವಾರದಲ್ಲಿ ಎಜಿಎಂ ಸಭೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
 
ಸಭೆ ಮುಂದೂಡಿಕೆ ಯಾಕೆ?
 
ಮುದ್ಗಲ್‌ ಸಮಿತಿ ವರದಿಯಲ್ಲಿ ಸುಪ್ರೀಂ ಕೋರ್ಟ್‌ ಪ್ರಕಟಿಸಿದ ಹೆಸರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಮುಖ್ಯಸ್ಥ (ಐಸಿಸಿ) ಎನ್‌. ಶ್ರೀನಿವಾಸನ್‌ ಹೆಸರಿದೆ. ಅಲ್ಲದೆ ಇವರ ಅಳಿಯ ಗುರುನಾಥ್‌ ಮೇಯಪ್ಪನ್‌, ರಾಜಸ್ಥಾನ ರಾಯಲ್ಸ್‌ ಸಹ ಮಾಲಕ ರಾಜ್‌ ಕುಂದ್ರಾ, ಐಪಿಎಲ್‌ ಸಿಇಒ ಸುಂದರ್‌ ರಾಮನ್‌ ಹೆಸರೂ ಬಹಿರಂಗಗೊಂಡಿದೆ. ಹೀಗಾಗಿ ಸಮಿತಿಯಲ್ಲಿ ಕೆಲವರು ಸುಪ್ರೀಂ ವರದಿ ಪೂರ್ಣಗೊಳಿಸುವವರೆಗೆ ಶ್ರೀನಿವಾಸನ್‌ ಚುನಾವಣೆಯಲ್ಲಿ ಭಾಗವಹಿಸಬಾರದು ಎಂದು ಒತ್ತಾಯಿಸಿದ್ದಾರೆ. ಮತ್ತೂಮ್ಮೆ ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಏರಲು ಹೊರಟಿದ್ದ ಶ್ರೀನಿಗೆ ಇದು ಬಹು ದೊಡ್ಡ ಹಿನ್ನಡೆಯಾಗಿದೆ.
 

Share this Story:

Follow Webdunia kannada