Select Your Language

Notifications

webdunia
webdunia
webdunia
webdunia

ಭಾರತ ವಿಶ್ವಕಪ್ ಗೆದ್ದಲ್ಲಿ ಕ್ರಿಕೆಟ್‌ಗೆ ಧೋನಿ ವಿದಾಯ ಸಾಧ್ಯತೆ

ಭಾರತ ವಿಶ್ವಕಪ್ ಗೆದ್ದಲ್ಲಿ ಕ್ರಿಕೆಟ್‌ಗೆ ಧೋನಿ ವಿದಾಯ ಸಾಧ್ಯತೆ
ಸಿಡ್ನಿ , ಗುರುವಾರ, 29 ಜನವರಿ 2015 (15:57 IST)
ಭಾರತದ ಕ್ರಿಕೆಟ್‌ ನಾಯಕ ಎಂ.ಎಸ್‌. ಧೋನಿ ಅವರು ವಿಶ್ವಕಪ್‌ನಲ್ಲಿ ಮೂರನೆ ಬಾರಿ ಮತ್ತು ಬಹುಶಃ ಅಂತಿಮ ಬಾರಿ ಆಡಲಿದ್ದಾರೆ. 15 ಸದಸ್ಯರ ಪ್ರಸಕ್ತ ಭಾರತ ತಂಡದಲ್ಲಿ ಧೋನಿ ಅವರೊಬ್ಬರೇ ಈ ಹಿಂದಿನ ಎರಡು ವಿಶ್ವಕಪ್‌ಗ್ಳಲ್ಲಿ(2007 ಮತ್ತು 2011) ಆಡಿದವರಾಗಿದ್ದಾರೆ.
 
2011ರಲ್ಲಿ  ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಧೋನಿ ಸಿಕ್ಸರ್‌ ಎತ್ತುವುದರೊಂದಿಗೆ ಭಾರತಕ್ಕೆ ವಿಶ್ವಕಪ್‌ ಪ್ರಶಸ್ತಿ ಜಯಿಸಿಕೊಟ್ಟಿದ್ದರು. ಭಾರತೀಯ ತಂಡದ 15 ಆಟಗಾರರ ಪೈಕಿ 11 ಮಂದಿ ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ ಮತ್ತು ಆರ್‌.ಅಶ್ವಿ‌ನ್‌ ಅವರು 2011ರ ವಿಜಯೀ ತಂಡದಲ್ಲಿದ್ದ ಇತರ ಮೂವರು ಆಟಗಾರರು.
 
ಧೋನಿ ಅವರಿಗೆ ಈಗ 33 ವರ್ಷ ವಯಸ್ಸಾಗಿದ್ದು ತಂಡದ ಅತಿಹಿರಿಯ ಆಟಗಾರನಾಗಿದ್ದಾರೆ. ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದರಿಂದ ಉಂಟಾಗುತ್ತಿರುವ "ಬಳಲಿಕೆ'ಯತ್ತ ಬೆಟ್ಟು ಮಾಡಿ ಮತ್ತು ಏಕದಿನ ಹಾಗೂ ಟಿ 20 ಮಾದರಿಗಳ ಬಗ್ಗೆ ಮಾತ್ರ ಗಮನ ಹರಿಸುವ ಸಲುವಾಗಿ ಅವರು ಕಳೆದ ತಿಂಗಳು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
 
ಓರ್ವ ಅತ್ಯುತ್ತಮ ಪಂದ್ಯ ಮುಕ್ತಾಯಗಾರ ಮತ್ತು ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ನಾಯಕನಾದ ಧೋನಿ ಅವರು ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ 2019ರ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಬಹುತೇಕ ಇಲ್ಲ. ಅವರು ಅಷ್ಟರಲ್ಲಿ 38ನೇ ಹರೆಯಕ್ಕೆ ಕಾಲಿರಿಸುವ ಹಂತದಲ್ಲಿರುತ್ತಾರೆ. ಸುಮಾರು 9 ವರ್ಷಗಳ ಕಾಲ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಸತತವಾಗಿ ಆಡಿರುವ ಧೋನಿ ಮುಂದಿನ ಎರಡು ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸುವ ನಿರೀಕ್ಷೆಯಿದೆ. ಒಂದು ವೇಳೆ ಅವರು ಭಾರತಕ್ಕೆ ಸತತ ಎರಡನೆ ಬಾರಿ ವಿಶ್ವಕಪ್‌ ಗೆಲ್ಲಿಸಿಕೊಟ್ಟಲ್ಲಿ ಆಗಲೇ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದಲ್ಲಿ ಅಚ್ಚರಿಯಿಲ್ಲ.
 

Share this Story:

Follow Webdunia kannada