Select Your Language

Notifications

webdunia
webdunia
webdunia
webdunia

ಸರ್ವರಿಗೂ ಪವಿತ್ರವಾದ ಆಷಾಢ ಮಾಸದ 'ಗುರು ಪೂರ್ಣಿಮಾ'

ಸರ್ವರಿಗೂ ಪವಿತ್ರವಾದ ಆಷಾಢ ಮಾಸದ 'ಗುರು ಪೂರ್ಣಿಮಾ'
, ಶುಕ್ರವಾರ, 29 ಜೂನ್ 2012 (16:04 IST)
PR
ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮಾ ದಿನವನ್ನು ಗುರು ಪೂರ್ಣಿಮ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಜುಲೈ 3 ರ ಮಂಗಳವಾರದಂದು ಗುರು ಪೂರ್ಣಿಮಾ ದಿವಸವಾಗಿದೆ.

ಗುರು ಪೂರ್ಣಿಮಾವು ಗುರು - ಶಿಷ್ಯ ಪರಂಪರೆಯ ಸಂಕೇತವಾಗಿದೆ ಸಂಸ್ಕೃತದಲ್ಲಿ 'ಗು' ಎಂದರೆ ಕತ್ತಲು 'ರು' ಎಂದರೆ ಹೋಗಲಾಡಿಸುವುದು ಅಂದರೆ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವವರಿಗೆ 'ಗುರು' ಎಂದು ಕರೆಯುತ್ತೇವೆ.

ಗುರು ಪೂರ್ಣಿಮಾ ದಿವಸವು ಅಜ್ಞಾನವನ್ನು ತೊಡೆದುಹಾಕಿ ಸಾರ್ಥಕ ಜೀವನದ ಜ್ಞಾನೋದಯ ಉಂಟುಮಾಡುವ ಸ್ಪೂರ್ತಿದಾಯಕ ದಿವಸವಾಗಿದೆ. (ಜ್ಞಾನವೇ ಮೋಕ್ಷ, ಅಜ್ಞಾನವೇ ಸಂಸಾರ)

ಇದು ಋಷಿಗಳಿಗೆ ಮಾತ್ರವಲ್ಲದೇ ವೇದಾಧ್ಯಯನ ಮಾಡುವವರಿಗೂ ಪವಿತ್ರವಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಸ್ಥಾನವಿರುವುದರಿಂದ ಗುರು ಪೂರ್ಣಿಮಾ ಸರ್ವರಿಗೂ ಪವಿತ್ರವಾಗಿದೆ. ಈ ದಿವಸ ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಬೇಕಾದುದು ಧಾರ್ಮಿಕ ಕರ್ತವ್ಯವಾಗಿದೆ.

ಈ ದಿವಸ ವೇದವ್ಯಾಸರ ಜಯಂತಿ. ವೇದವ್ಯಾಸ ಸಾಂಕೇತಿಕಾರ್ಥವುಳ್ಳ ರಹಸ್ಯ ಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಅವರು ಅಧ್ಯಾತ್ಮ, ಇತಿಹಾಸ, ಜ್ಞಾನ, ವಿಜ್ಞಾನಗಳ ಕಣಜವಾಗಿದ್ದರು. ವ್ಯಾಸ ಮಹರ್ಷಿ ಎಂದು ಪ್ರಸಿದ್ಧರಾದ ಕೃಷ್ಣೆದ್ವೈಪಾಯನರು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿದರು. ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ ಎಂಬ ಬಿರುದಾಂಕಿತರಾದರು. ಈ ಮಹತ್ಕಾರ್ಯದ ಸಲುವಾಗಿ ಅವರು ಮಹಾಗುರು ಎಂಬ ಕೀರ್ತಿಗೆ ಪಾತ್ರರಾದರು.

ವೇದವ್ಯಾಸರು ನಾಲ್ಕು ವೇದಗಳ ರಚನೆ, ಪರಿಷ್ಕರಣೆ ಮತ್ತು ಕ್ರೂಡೀಕರಣವನ್ನು ಮುಗಿಸಿದ್ದು ಆಷಾಢ ಹುಣ್ಣಿಮೆಯ ದಿವಸ ಬ್ರಹ್ಮಸೂತ್ರ ಬರೆದು ಪೂರ್ಣಗೊಳಿಸಿದ್ದು ಆಷಾಢ ಹುಣ್ಣಿಮೆಯ ದಿವಸ.

ವೇದವ್ಯಾಸರು ರಚಿಸಿದ ಗ್ರಂಥಗಳು ನಾಲ್ಕುವೇದಗಳು, ಅಷ್ಟದಶ ಪುರಾಣಗಳು (18 ಪುರಾಣಗಳು) ಬ್ರಹ್ಮಸೂತ್ರ ಮತ್ತು ಮಹಾಭಾರತ ಇತಿಹಾಸ.

ವಿಶ್ವದ ಅತಿ ಶ್ರೇಷ್ಠ ಸಪ್ತರ್ಷಿಗಳಾದ ಅತ್ರಿ, ಬ್ರುಗು, ಪುಲಸ್ಯ, ವಶಿಷ್ಠ, ಗೌತಮ, ಅಂಗೀರಸ ಮತ್ತು ಮರೀಚಿ ಮಹರ್ಷಿಗಳು ವಿಶ್ವ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಸಂಪೂರ್ಣವಾಗಿ ತೊಡಗಿಸಿಕೊಂಡು ಅಂತರಾಳದ ಪರಿಪೂರ್ಣತೆ ಮತ್ತು ಜ್ಞಾನದ ಬೆಳಕನ್ನು ಮಾನವ ಧರ್ಮಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ. ಇವರುಗಳು ಮನುಕುಲಕ್ಕೆ ಜೀವನ ಮತ್ತು ವಿಶ್ವದ ರಹಸ್ಯಗಳನ್ನು ಭೋದಿಸಿ ಮುಖ್ಯವಾಗಿ ಅನಿರ್ಬಂದಿತ ಪ್ರೀತಿ, ಧರ್ಮಶ್ರದ್ದೆ, ಪರಿಪೂರ್ಣ ಸಂತೋಷ ಮತ್ತು ಕ್ಷಮಾ ಶೀಲತೆಯನ್ನು ಕೊಡುಗೆಯಾಗಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅವಕಾಶಗಳನ್ನು ಜ್ಞಾಪಿಸಿಕೊಂಡು ಪೂಜಿಸುವುದು ಸೂಕ್ತ.

ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ದಾಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ದಿ, ಸತ್ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯುಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.

ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರರು, ತಾಯಿ ಸತ್ಯವತಿ. ಒಮ್ಮೆ ಮಹರ್ಷಿ ಪರಾಶರರು ಯಾತ್ರೆಯ ಸಲುವಾಗಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಕೆಟ್ಟ ವಾಸನೆ ಬರುತ್ತಿತ್ತು. ಆ ದ್ವೀಪಕ್ಕೆ ಹೋಗಿ ನೋಡಿದಾಗ ಒಬ್ಬ ಕುರೂಪಿಯಾದ ಸ್ತ್ರೀ ಕುಳಿತಿದ್ದಳು. ಆಕೆಯ ದೇಹದಿಂದಲೇ ಈ ಕೆಟ್ಟ ವಾಸನೆ ಬರುತ್ತಿತ್ತು. ಆಕೆ ಪರಾಶರ ಮುನಿಗಳನ್ನು ನೋಡಿ, ಬಳಿಗೆ ಬಂದು ಅವರ ಪಾದಕ್ಕೆರಗಿದಳು. ಆಕೆಯ ಹೆಸರು ಸತ್ಯವತಿ. ಬೆಸ್ತರ ಮಗಳು. ವಸುದೇವರಿಂದ ಶಾಪಗ್ರಸ್ತಳಾಗಿ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು. ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕೆಂದು ಪ್ರಾರ್ಥಿಸಿದಾಗ, ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡಿದರು. ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವಂತಳಾದಳು. ನಂತರ, ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ, ಗಾಂಧರ್ವ ರೀತಿಯಲ್ಲಿ ಆಕೆಯ ವಿವಾಹವಾದರು. ಇವರಿಂದ ಜನಿಸಿದ ಮಗುವೇ ಕೃಷ್ಣ ದ್ವೈಪಾಯನ. ಕೃಷ್ಣ ಎಂದರೆ ಕಪ್ಪು, ಕತ್ತಲೆ; ದ್ವೈಪ ಎಂದರೆ ದ್ವೀಪ. ಆಯನ ಎಂದರೆ ಸುತ್ತಲೂ ನೀರಿನಿಂದ ಆವೃತವಾದ ಪ್ರವೇಶವಾಗಿರುವುದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು.

ಆರ್. ಸೀತಾರಾಮಯ್ಯ,
ಜೋತೀಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೋ: 94490 48340
ಪೋನ್: 08182-227344

Share this Story:

Follow Webdunia kannada